ಪುತ್ತೂರು: ಪ್ರವೀಣ್ ನೆಟ್ಟಾರು ರವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಆ.11) ರಂದು ಮಧ್ಯಾಹ್ನ 12.30ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆಯವರು ಮಂಗಳೂರಿನ ಎಸ್.ಪಿ. ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು, ಅದರಲ್ಲಿ ಹತ್ಯೆ ಸಂಚಿನ ಸಂಪೂರ್ಣ ವಿವರ, ಹತ್ಯೆಯ ಹಿಂದಿನ ಕಾರಣ ಹಾಗೂ ಆರೋಪಿಗಳ ವಿವರ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಜು.26 ರಂದು ರಾತ್ರಿ ಬೆಳ್ಳಾರೆ ಚಿಕನ್ ಸೆಂಟರ್ ಬಳಿ ಪ್ರವೀಣ್ ನೆಟ್ಟಾರು ರವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಮಂದಿಯನ್ನು ಬಂಧಿಸಲಾಗಿದ್ದು, ಪ್ರಮುಖ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿತ್ತು.
ಆದರೇ ನಿನ್ನೆ ಎಡಿಜಿಪಿ ಅಲೋಕ್ ಕುಮಾರ್ ರವರು ಸುದ್ದಿಗಾರರೊಂದಿಗೆ ಮಾತನಾಡಿ, ಪರಾರಿಯಾದ ಮೂವರು ಆರೋಪಿಗಳ ಫೋಟೋ , ಮನೆ ವಿಳಾಸ, ಮನೆಯವರ ಬಗ್ಗೆ ತಿಳಿದಿದೆ. ಆದರೆ ಆರೋಪಿಗಳನ್ನು ಕೆಲವರು ಸೇರಿ ಬಚ್ಚಿಟ್ಟಿದ್ದಾರೆ. ಅವರನ್ನು ಯಾವ ರೀತಿ ಪತ್ತೆ ಹಚ್ಚಬೇಕು ಎಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದಿದ್ದರು.
ಪರಾರಿಯಾದ ಆರೋಪಿಗಳನ್ನು ಪತ್ತೆಹಚ್ಚಲು ಕೋರ್ಟ್ ಮುಖಾಂತರ ವಾರೆಂಟ್ ಪಡೆದು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.
ಈ ಹಿನ್ನೆಲೆ ಪರಾರಿಯಾದ ಪ್ರಮುಖ ಆರೋಪಿಗಳ ಬಂಧನವಾಗಿದೆ ಎನ್ನಲಾಗುತ್ತಿದ್ದು, ಬುಧವಾರ ರಾತ್ರಿಯೇ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ., ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆಯೇ, ಇಲ್ಲವೇ ಮತ್ತೆ ಯಾವ ವಿಚಾರಕ್ಕಾಗಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ ಎನ್ನುವುದು ಕಾದು ನೋಡಬೇಕಿದೆ..

























