ಕಡಬ: ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ವೇಳೆ ನಿವೃತ್ತ ಸೈನಿಕರೋರ್ವರು ಕುಸಿದು ಬಿದ್ದು ಅಸ್ವಸ್ಥಗೊಂಡು, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಕುಟ್ರುಪಾಡಿಯಲ್ಲಿ ನಡೆದಿದೆ.

ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ಹಳೆಸ್ಟೇಷನ್ ಅಮೃತ ಸರೋವರದ ಬಳಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಘಟನೆ ನಡೆದಿದೆ.
ಮೃತರನ್ನು ನಿವೃತ್ತ ಸೈನಿಕ ಗಂಗಾಧರ ಗೌಡ ಎಂದು ಗುರುತಿಸಲಾಗಿದೆ.

ಹೊಸಮಠ ಸಿ.ಎ. ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಎನ್. ಕರುಣಾಕರ ಗೋಗಟೆ ರವರು ಧ್ವಜಾರೋಹಣ ಮಾಡಲು ಸಿದ್ಧತೆ ಮಾಡುತ್ತಿದ್ದಾಗ ಅವರಿಗೆ ನಿವೃತ್ತ ಸೈನಿಕ ಗಂಗಾಧರ ಗೌಡ ಅವರು ಧ್ವಜ
ವಂದನೆಯ ಮಾಹಿತಿ ನೀಡಿ ಧ್ವಜಾರೋಹಣಕ್ಕೆ ಸಿದ್ದವಾಗುತ್ತಿದ್ದ ವೇಳೆ ಗಂಗಾಧರ ಗೌಡ ಕುಸಿದು ಬಿದ್ದು ಅಸ್ವಸ್ಥಗೊಂಡರು ಎನ್ನಲಾಗಿದೆ.
ಈ ವೇಳೆ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.



























