ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಹಲವು ಕಾರ್ಯಕ್ರಮಗಳಲ್ಲಿ ಕಣ್ಮನ ಸೆಳೆಯುವುದು ಪೆರೇಡ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಇಂತಹ ಒಂದು ಭವ್ಯವಾದ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಸಾಹಿತ್ಯ ಕೆ.ಪಿ. ಭಾಗವಹಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ನೃತ್ಯ ಮತ್ತು ಸಂಗೀತವನ್ನು ಕರಗತ ಮಾಡಿಕೊಂಡಿರುವ ಇವರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹಲವು ವೇದಿಕೆಗಳಲ್ಲಿ ತನ್ನ ನೃತ್ಯ ಮತ್ತು ಸಂಗೀತದ ಮೂಲಕ ಮನರಂಜನೆಯನ್ನು ಉಣಬಡಿಸಿದ ಇವರ ಪಾಲಿಗೆ ನೃತ್ಯ ಮತ್ತು ಸಂಗೀತಗಳೆರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.
ಸಾಹಿತ್ಯ ಮೂಲತಃ ಸುಳ್ಯದ ಕೇರ್ಪಳ ಪುರುಷೋತ್ತಮ ಮತ್ತು ಆರತಿ ದಂಪತಿಗಳ ಪುತ್ರಿ. ತನ್ನ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಬ್ರಿಜಿಡ್ಸ್ ಸುಳ್ಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿ ಅರಂತೋಡಿನ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನುಪೂರೈಸಿ ಇದೀಗ ಪುತ್ತೂರಿನಲ್ಲಿ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಭೂತ ಪೂರ್ಣ ಸಾಧನೆ ಮಾಡಿರುವ ಸಾಹಿತ್ಯ ಎನ್‌ಸಿಸಿ ಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಶಿಸ್ತಿನ ಸಿಪಾಯಿಯಾಗಿದ್ದಾರೆ. ಎನ್‌ಸಿಸಿಯಲ್ಲಿ ಚುರುಕಿನ ಚಿನ್ನಾರಿಯಾಗಿರುವ ಇವರು ಕೊಡಗಿನ ಸೈನಿಕ್ ಸ್ಕೂಲ್ ನಲ್ಲಿ ಮೇ 16 ರಿಂದ 25ರವರೆಗೆ ನಡೆದ ಸಿಎಟಿಸಿ ಕ್ಯಾಂಪ್ ನಲ್ಲಿ ಭಾಗವಹಿಸಿ ಅಲ್ಲಿ ಇವರು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೆಚ್ಚಿ 75ನೇ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ತಂಡದಲ್ಲಿ ಭಾಗಿಯಾಗಿದ್ದಾರೆ. ಕೊಡವ ಉಡುಪಿನಲ್ಲಿ ಸಾಹಿತ್ಯ ರವರು ಪ್ರಧಾನಿ ನರೇಂದ್ರ ಮೋದಿ ರವರ ಹಸ್ತಲಾಘವ ಮಾಡಿದ್ದು, ಸಾಂಸ್ಕೃತಿಕ ಕ್ಷೇತ್ರದ ಇವರ ಸಾಧನೆಗೆ ಊರಿಗೆ ಊರೇ ಸಂಭ್ರಮಿಸುವಂತೆ ಮಾಡಿದೆ.

ನೃತ್ಯದಲ್ಲಿ ಮಯೂರಿಯನ್ನು ನಾಚಿಸುವ ಇವರು ವಿದೂಷಿ ಅರ್ಚನಾ ರವರ ಗರಡಿಯಲ್ಲಿ ಭರತನಾಟ್ಯದಲ್ಲಿ ಜೂನಿಯರ್ ಪೂರ್ಣಗೊಳಿಸಿದ್ದಾರೆ. ತಾಯಿಯೇ ಮೊದಲ ಗುರು ಎಂಬಂತೆ ತಾಯಿ ಆರತಿ ಮತ್ತು ಕೆ ಆರ್ ಗೋಪಾಲಕೃಷ್ಣ ಇವರಿಬ್ಬರಿಂದ ಸಂಗೀತ ತರಬೇತಿ ಪಡೆದು ಸುಗಮ ಸಂಗೀತವನ್ನು ಅಭ್ಯಾಸ ಮಾಡಿರುವುದರ ಜೊತೆಗೆ ಅಭಿಜಿತ್ ಕುಲಾಲ್ ಮತ್ತು ಶಿವಕುಮಾರ್ ಅವರಿಂದ ಫ್ಯೂಶನ್ ಡಾನ್ಸ್ ತರಬೇತಿ ಪಡೆದಿದ್ದಾರೆ. ಸುಮಾರು 400ಕ್ಕೂ ಸಂಗೀತ ಕಾರ್ಯಕ್ರಮ ಮತ್ತು 300ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿರುವ ಇವರು ಸ್ಪಂದನ ಎಚ್ ಡಿ ವಾಹಿನಿಯಲ್ಲಿ ಪ್ರಸಾರವಾದ ಗಾನಸಿರಿ ಸ್ವರ ಸಂಗಮದಲ್ಲಿ ಸ್ಪರ್ಧಿಸಿದ ಹೆಮ್ಮೆ ಇವರದು. ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ನೃತ್ಯ ಪ್ರದರ್ಶಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಗೌಡರ ಚಾವಡಿ ಗಾಯನ ಸ್ಪರ್ಧೆಯಲ್ಲಿ ಉತ್ತಮ ಹಾಡುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರಲ್ಲದೆ ಆರ್ಕೆಸ್ಟ್ರಾ ಮತ್ತು ವಿವಿಧ ಸಮಾರೋಪ ಸಮಾರಂಭಗಳಿಗೆ ಸಂಗೀತ ಕಛೇರಿಯನ್ನು ನೀಡುವುದರ ಜೊತೆಗೆ ಸ್ವ-ಇಚ್ಚೆಯಿಂದ ಕೀಬೋರ್ಡ್ ಪ್ಲೇ ಮಾಡುವುದನ್ನು ಕಲಿತಿದ್ದಾರೆ. ಓದಿನಲ್ಲೂ ಮುಂಚೂಣಿಯಲ್ಲಿರುವ ಇವರು ಬಹಳಷ್ಟು ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಕ್ರೀಡೆಯಲ್ಲೂ ತನ್ನ ಚಾಪನ್ನು ಮೂಡಿಸಿಕೊಂಡಿದ್ದಾರೆ.ಇವರ ಮಧುರ ಕಂಠಕ್ಕೆ ಮಲೆನಾಡ ಗಾನಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಗಳ ಸಾಧನೆ ತುಂಬಾ ಸಂತೋಷ ತಂದಿದೆ. ಊರವರು ನನ್ನ ಮಗಳ ಬಗ್ಗೆ ಮಾತನಾಡುವಾಗ ಹೆಮ್ಮೆ ಅನಿಸುತ್ತದೆ. ಈ ಸಾಧನೆಗೆ ಗುರುಗಳ ಮತ್ತು ಅವಳ ಶ್ರಮ ಇಂದು ನಮ್ಮನ್ನು ಎಲ್ಲರಲ್ಲೂ ಗುರುತಿಸುವಂತೆ ಮಾಡಿದೆ. ಹೀಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಸಾಹಿತ್ಯ ರವರ ತಾಯಿ ಆರತಿ ಪುರುಷೋತ್ತಮ ರವರು ಹಾರೈಸಿದ್ದಾರೆ.


























