ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಪುನರ್ ರಚನೆಯಾಗಿದ್ದು, ಹೊಸ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪ ರವರಿಗೆ ಸ್ಥಾನ ಲಭಿಸಿದೆ.
ಬಿಜೆಪಿಯಲ್ಲಿ ನೀತಿ ತೀರ್ಮಾನ ಕೈಗೊಳ್ಳುವ ಉನ್ನತ ಸಮಿತಿಯೇ ಬಿಜೆಪಿ ಸಂಸದೀಯ ಮಂಡಳಿ. ಈ ಸಮಿತಿಯಿಂದ ನಿತಿನ್ ಗಡ್ಕರಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈಬಿಡಲಾಗಿದ್ದು, ಯಡಿಯೂರಪ್ಪ ಮತ್ತು ಸರ್ಬಾನಂದ ಸೋನೋವಾಲ್ ಅವರಿಗೆ ಸ್ಥಾನ ನೀಡಲಾಗಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿಯೂ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಲಾಗಿದೆ.
ಕೇಂದ್ರೀಯ ಚುನಾವಣಾ ಸಮಿತಿಯ ಇತರ ಸದಸ್ಯರೆಂದರೆ ಜೆಪಿ ನಡ್ಡಾ, ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ಕೆ.ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್ಪುರ, ಸುಧಾ ಯಾದವ್, ಸತ್ಯ ನಾರಾಯಣ್ ಜಟಿಯಾ, ಓಂ ಮಾಥುರ್, ಭುಪೇಂದ್ರ ಯಾದವ್, ದೇವೇಂದ್ರ ಫಡ್ನವಿಸ್, ಸರ್ಬಾನಂದ ಸೋನೋವಾಲ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್. ಈ ಹಿಂದೆ ಕರ್ನಾಟಕದ ಅನಂತ ಕುಮಾರ್ ಸಂಸದೀಯ ಮಂಡಳಿಯ ಸದಸ್ಯರಾಗಿದ್ದರು.
ಮಂಡಳಿಯಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಕೆ. ಲಕ್ಷ್ಮಣ್ ಅವರನ್ನು ಸೇರಿಸಿದ್ದು ಅವರಿಗೆ ಪದೋನ್ನತಿ ಸಿಕ್ಕಿದಂತಾಗಿದೆ. ಲಕ್ಷ್ಮಣ್ ಅವರು ತೆಲಂಗಾಣದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇತ್ತ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಪತನಗೊಳಿಸಿ ಅಧಿಕಾರಕ್ಕೇರಿದ ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವಿಸ್ ಅವರಿಗೂ ಸ್ಥಾನ ಲಭಿಸಿದೆ.
ಸಂಸದೀಯ ಮಂಡಳಿಯು ಬಿಜೆಪಿಯ ಆಡಳಿತ ಮಂಡಳಿಯಾಗಿದ್ದು ಅದು ರಾಷ್ಟ್ರೀಯ ಕಾರ್ಯಕಾರಿಣಿಯ ಪರವಾಗಿ ದಿನನಿತ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ರಾಷ್ಟ್ರೀಯ ಕಾರ್ಯಕಾರಿಣಿಯು ಪಕ್ಷದ ಅಧ್ಯಕ್ಷರು ಮತ್ತು ಇತರ ಹತ್ತು ಸದಸ್ಯರನ್ನು ಒಳಗೊಂಡ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯನ್ನು ಸ್ಥಾಪಿಸುತ್ತದೆ. ಪಕ್ಷದ ಸಂಸದೀಯ ಮತ್ತು ಶಾಸಕಾಂಗ ಗುಂಪುಗಳ ಚಟುವಟಿಕೆಗಳನ್ನು ಮಂಡಳಿಯು ಮೇಲ್ವಿಚಾರಣೆ ಮಾಡುತ್ತದೆ. ಇದು ರಾಷ್ಟ್ರೀಯ ಕಾರ್ಯಕಾರಿಣಿಯ ಕೆಳಗಿರುವ ಎಲ್ಲಾ ಸಾಂಸ್ಥಿಕ ಘಟಕಗಳಿಗೆ ಮಾರ್ಗದರ್ಶನ ನೀಡುವುದು ಮಾತ್ರವಲ್ಲದೆ ಅವುಗಳನ್ನು ನಿಯಂತ್ರಿಸುತ್ತದೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯಲ್ಲೂ ಯಡಿಯೂರಪ್ಪಗೆ ಸ್ಥಾನ..!!
ಲೋಕಸಭಾ, ವಿಧಾನಸಭಾ ಚುನಾವಣಾ ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸುವ ಕೇಂದ್ರ ಚುನಾವಣಾ ಸಮಿತಿಯಲ್ಲಿಯೂ ಯಡಿಯೂರಪ್ಪಗೆ ಸ್ಥಾನ ನೀಡಲಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಬಿಜೆಪಿಗೆ ಕೈಕೊಟ್ಟರೇ ಪಕ್ಷಕ್ಕೆ ನಷ್ಟ ಎಂಬ ಲೆಕ್ಕಾಚಾರದ ಮೇಲೆ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಯಡಿಯೂರಪ್ಪಗೆ ಪ್ರಮುಖ ಸ್ಥಾನಮಾನ ನೀಡಿ ಬಿಜೆಪಿ ಹೈಕಮಾಂಡ್ ಓಲೈಸಿದೆ. ಈ ಲೆಕ್ಕಾಚಾರವೇ ಬಿಜೆಪಿಯ ಸಂಸದೀಯ ಮಂಡಳಿ, ಕೇಂದ್ರ ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪಗೆ ಸ್ಥಾನ ನೀಡಲು ಕಾರಣ ಎಂದು ಹೇಳಲಾಗುತ್ತಿದೆ.


























