ಮಥುರಾ: ದೇಶಾದ್ಯಂತ ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗಿದೆ. ಆದರೆ, ಉತ್ತರ ಪ್ರದೇಶದ ಮಥುರಾದಲ್ಲಿ ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಜಾಸ್ತಿ ಇದ್ದುದರಿಂದ ಉಸಿರುಗಟ್ಟಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ವೇಳೆ 6 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಥುರಾದ ದೇವಸ್ಥಾನದಲ್ಲಿ ಮಧ್ಯರಾತ್ರಿಯ ಸಂಭ್ರಮಾಚರಣೆ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಥುರಾದ ಬಂಕೆ ಬಿಹಾರಿ ದೇವಸ್ಥಾನದ ಒಳಗೆ ಭಾರೀ ಜನಸಂದಣಿ ಇತ್ತು. ಸೆಖೆ ಮತ್ತು ಗಾಳಿಯಿಲ್ಲದೆ ದೇವಸ್ಥಾನದ ಆವರಣದೊಳಗೆ ಅನೇಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. “ಮಥುರಾದ ಬಂಕೆ ಬಿಹಾರಿಯಲ್ಲಿ ಮಂಗಳಾರತಿ ಸಮಯದಲ್ಲಿ ದೇವಸ್ಥಾನದ ನಿರ್ಗಮನ ದ್ವಾರದಲ್ಲಿ ಭಕ್ತರೊಬ್ಬರು ಮೂರ್ಛೆ ತಪ್ಪಿ ಬಿದ್ದರು. ಇದರಿಂದಾಗಿ ಭಕ್ತರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಭಾರೀ ಜನಸಂದಣಿ ಇದ್ದುದರಿಂದ ಆವರಣದೊಳಗೆ ಅನೇಕ ಭಕ್ತರು ಉಸಿರಾಡಲು ಪರದಾಡಿದರು. ಈ ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಮಥುರಾ ಎಸ್‌ಎಸ್‌ಪಿ ತಿಳಿಸಿದ್ದಾರೆ.


























