ಜಮೀನು ವಿಚಾರವಾಗಿ ವ್ಯಕ್ತಿಯೋರ್ವ ಮನೆಗೆ ನುಗ್ಗಿ ಕತ್ತಿಯಿಂದ ತಲೆಗೆ ಹಲ್ಲೆ ನಡೆಸಿದ್ದಾನೆಂದು ಆರೋಪಿಸಿ ಮಹಿಳೆಯೋರ್ವರು ಆಸ್ಪತ್ರೆಗೆ ದಾಖಲಾದ ಘಟನೆ ಕೊಣಾಜೆ ಗ್ರಾಮದ ಪುಂಡಿಕಲ್ ಎಂಬಲ್ಲಿ ನಡೆದಿದ್ದು, ಕೊಣಾಜೆ ಗ್ರಾಮದ ಪುಂಡಿಕಲ್ ನಿವಾಸಿ ಗಣೇಶ್ ಪೂಜಾರಿ ಎಂಬವರ ಪತ್ನಿ ಸಾರಿಕ ಆಸ್ಪತ್ರೆಗೆ ದಾಖಲಾದ ಮಹಿಳೆ.

ಈ ಬಗ್ಗೆ ಸಂತ್ರಸ್ತ ಮಹಿಳೆಯ ಸಹೋದರ ಬಿಳಿಯೂರಿನ ಸುರೇಶ್ ನೂಜೆ ರವರು ಮಾತನಾಡಿದ್ದು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು ಎಂಬಾತ ನಮ್ಮ ಸಂಬಂಧಿಕನೇ ಆಗಿದ್ದು, ನನ್ನ ಅಕ್ಕನ ಗಂಡನ ಅಣ್ಣನ ಮಗಳನ್ನು ಆತ ವಿವಾಹವಾಗಿದ್ದಾನೆ. ನನ್ನ ಭಾವನ ಅಣ್ಣನ ಕುಟುಂಬವೇ ಕಿರಿಕಿರಿಯ ಕುಟುಂಬವಾಗಿದೆ.
ನನ್ನ ಭಾವನಿಗೆ ಪಾಲು ಪಟ್ಟಿಯಲ್ಲಿ ದೊರೆತ ಜಾಗವನ್ನು ಅವರು ವಶ ಪಡಿಸಿಕೊಂಡಿದ್ದು, ಏಕಾಏಕಿ ಆತ 40 ಸೆಂಟ್ಸ್ ಜಾಗ ಮಾತ್ರವಲ್ಲದೇ ಉಳಿದ ಕುಮ್ಕಿ ಜಾಗವನ್ನು ತನ್ನ ಜಾಗವೆಂದು ಹೇಳಿಕೊಂಡು ಆಕ್ರಮಿಸಲು ಮುಂದಾಗಿದ್ದು, ಈ ಬಗ್ಗೆ ಠಾಣೆಯಲ್ಲಿ ದೂರು ನೀಡಿದ್ದು, ವಿಚಾರಣೆ ನಡೆಸಿದಾಗ ಲಿಖಿತ ರೂಪದಲ್ಲಿ ಬರೆದು ಕೊಡಲಾಗಿದ್ದು, 24 ಸೆಂಟ್ಸ್ ನ ಹೊರಗಡೆ ಆತ ಯಾವುದೇ ಯಾವುದೇ ಮರ ಗಿಡಗಳನ್ನು ತೆಗೆಯಬಾರದು ಎಂದು ಬರೆದು ಕೊಡಲಾಗಿದೆ. ಆದ್ರೂ ಈ ಬಗ್ಗೆ ಕ್ಯಾರೇ ಎನ್ನದೇ ಆತ ನನ್ನ ಅಕ್ಕನ ಮೇಲೆ ಇದೇ ವಿಚಾರವಾಗಿ ಹಲವು ಬಾರಿ ಬೆದರಿಕೆ ಹಾಕಿದ್ದು ಮೊನ್ನೆ ಮನೆಗೆ ನುಗ್ಗಿ ಕತ್ತಿಯಿಂದ ಹಲ್ಲೆ ನಡೆಸಿದ್ದು, ಘಟನೆಯ ಬಗ್ಗೆ ಪೊಲೀಸರು ಸರಿಯಾದ ವಿಚಾರಣೆ ನಡೆಸಿಲ್ಲ, ಆರೋಪಿಯು ಬಿಜೆಪಿ ಪಕ್ಷದ ಪ್ರಭಾವ ಬಳಸುತ್ತಿದ್ದಾನೆ. ಪೊಲೀಸ್ ಠಾಣೆ ನನ್ನ ಕಂಟ್ರೋಲ್ ನಲ್ಲಿ ಇದೆ ಎಂದು ಹಲ್ಲೆ ನಡೆಸಿದ್ದಾನೆ. ನಾವು ನಮಗಾಗಿರುವ ಅನ್ಯಾಯದ ವಿರುದ್ಧ ನ್ಯಾಯಯುತವಾಗಿ ಹೊರಟ ಮಾಡುತ್ತೇವೆ., ಒಂದು ವೇಳೆ ನ್ಯಾಯ ಸಿಗದಿದ್ದಲ್ಲಿ ಪ್ರತಿಭಟನೆ ನಡೆಸುತ್ತೇವೆ, ಮುಂದಿನ ಬೆಳವಣಿಗೆಗಳಿಗೆ ಪೊಲೀಸ್ ಇಲಾಖೆಯೇ ನೀರ ಹೊಣೆಯಾಗಲಿದೆ ಎಂದು ಆಕ್ರೋಶ ಹೊರ ಹಾಕಿದರು.

ಈ ಬಗ್ಗೆ ಸಂತ್ರಸ್ತ ಮಹಿಳೆ ಸಾರಿಕಾ ಮಾತನಾಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು , ಜಾಗದ ವಿಚಾರವಾಗಿ ಮನೆಗೆ ನುಗ್ಗಿ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದು ಕತ್ತಿಯ ಹೊಡೆತ ನನ್ನ ತಲೆಗೆ ಬಿದ್ದ ಕಾರಣ ತಲೆಗೆ ಹೊಲಿಗೆ ಹಾಕಲಾಗಿದೆ, ಹಲ್ಲೆಯ ಬಳಿಕ ಆಸ್ಪತ್ರೆಗೆ ಕರೆದೊಯ್ಯಲು ಬಂದ ಆಟೋ ಚಾಲಕನಿಗೆ ಬೆದರಿಸಿ ಕಳುಹಿಸಿದ್ದಾನೆ ಮತ್ತು ಈ ಬಗ್ಗೆ ದೂರು ನೀಡಿದರೆ ನನಗೆ ಕಡಬ, ನೆಲ್ಯಾಡಿ, ಉಪ್ಪಿನಂಗಡಿ ಠಾಣೆಯಲ್ಲಿ ನನ್ನ ಪರಿಚಯದವರಿದ್ದಾರೆ ಏನು ಮಾಡುತ್ತಿ ಮಾಡು ಎಂದು ಬೆದರಿಸುತ್ತಾನೆ. ಸದ್ಯ ನಾನೂ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ.
ಆತನ ವಿಚಾರವಾಗಿ ಪೊಲೀಸರು ತನಿಖೆಯನ್ನು ಸರಿಯಾದ ರೀತಿಯಲ್ಲಿ ಕೈಗೊಂಡಿಲ್ಲ ಕತ್ತಿಯಿಂದ ಹಲ್ಲೆ ನಡೆಸಿದ ಪ್ರಕರಣ ದಾಖಲಿಸಿಲ್ಲ ಬದಲಾಗಿ ನಾನು ಬಿದ್ದು ಗಾಯವಾಗಿದೆ ಎಂದು ಕಥೆ ಕಟ್ಟಿದ್ದಾರೆ ಎಂದು ಆರೋಪಿಸಿದ್ದು, ಒಂದು ಮಹಿಳೆ ಎಂದು ನೋಡದೆ ಆತ ನನ್ನ ಮೇಲೆ ಕತ್ತಿ ಬೀಸಿದ್ದಾನೆ. ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸಿ, ಆತನ ಬೆದರಿಕೆಗೆ ಮಣಿಯದೆ ಸರಿಯಾದ ರೀತಿಯಲ್ಲಿ ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇನ್ನೂ ಈ ವಿಚಾರವಾಗಿ ಮಹಿಳಾ ಆಯೋಗಕ್ಕೂ ದೂರು ನೀಡಲಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.


























