ಮಾಣಿ : ಗ್ರಾಮ ಪಂಚಾಯತ್ತಿನ ಆಗಸ್ಟ್ ತಿಂಗಳ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.

ಗ್ರಾಮೀಣ ಭಾಗದ ಜನರಿಗೆ ಬಿಪಿಎಲ್ ಕಾರ್ಡಿನ ಭಾರೀ ಅಗತ್ಯ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರಿ ಮಟ್ಟದಲ್ಲಿ ಬಿಪಿಎಲ್ ಕಾರ್ಡಿಗೆ ಸಂಬಂಧಪಟ್ಟ ಹಾಗೆ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ. ಜನರು ಇದರ ಬಗ್ಗೆ ಕೇಳಿದಾಗ ಕೇವಲ ತಾಂತ್ರಿಕ ದೋಷದ ಬಗ್ಗೆ ಮಾತ್ರ ಹೇಳಲಾಗುತ್ತಿದೆ. ಸರಿಯಾದ ಉತ್ತರವೇ ಇಲ್ಲ. ಈ ಸಮಸ್ಯೆಗೆ ಪಂಚಾಯತ್ ಮಟ್ಟದಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸದಸ್ಯ ಸುದೀಪ್ ಕುಮಾರ್ ಶೆಟ್ಟಿ ಸಭೆಯಲ್ಲಿ ಪ್ರಶ್ನಿಸಿದರು. ಈ ಹೊತ್ತಿನಲ್ಲಿ ಪಂಚಾಯತ್ ಅಧ್ಯಕ್ಷರು, ತಾಲೂಕು ದಂಡಾಧಿಕಾರಿಯವರಿಗೆ ಇದರ ಬಗ್ಗೆ ಪತ್ರ ಬರೆದು ಸಮಸ್ಯೆಗೆ ಸೂಕ್ತ ಉತ್ತರವನ್ನು ಪಡೆದುಕೊಳ್ಳುವ ಹಾಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಿಗೆ ಸೂಚಿಸಿದರು.

ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ಅಂಗಡಿಗಳ ಮಾಲಿಕರು ಪರವಾನಿಗೆಯನ್ನು ಪಡೆದಿರುವುದಿಲ್ಲ ಮತ್ತು ಇನ್ನು ಕೆಲವರು ಪರವಾನಿಗೆ ನವೀಕರಿಸಿರುವುದಿಲ್ಲ. ಇದು ಪಂಚಾಯತ್ ಆದಾಯಕ್ಕೆ ದೊಡ್ಡ ಹೊಡೆತ. ಇದಕ್ಕೆ ಯಾಕೆ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್ ಪ್ರಶ್ನಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವ ಬ್ಯಾನರ್ ಗಳಿಗೆ ಶುಲ್ಕ ವಿಧಿಸುವ ಬಗ್ಗೆ ಸದಸ್ಯರು ಆಗ್ರಹಿಸಿದರು.

ಸಭೆಯಲ್ಲಿ ಗ್ರಾಮದ ಆಗುಹೋಗುಗಳ ಬಗ್ಗೆ ಚರ್ಚಿಸಲಾಯಿತು. ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರಾದ ಇಬ್ರಾಹಿಂ.ಕೆ.ಮಾಣಿ, ನಾರಾಯಣ ಶೆಟ್ಟಿ, ರಮಣಿ.ಡಿ.ಪೂಜಾರಿ, ಸೀತಾ, ಸುಜಾತಾ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಗಿರಿಜಾ ಸ್ವಾಗತಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.



























