ಶಿವಮೊಗ್ಗ: ಕೆಲ ದಿನಗಳ ಹಿಂದೆ ನಗರದಲ್ಲಿ ಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ನಡೆದ ಗಲಭೆ ಹಿನ್ನೆಲೆ ನಗರದ ಎಸ್‍ಡಿಪಿಐ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗದ ಅಮೀರ್ ಅಹಮ್ಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕುವ ವಿಚಾರ ಸಂಬಂಧ ನಡೆದ ಗಲಾಟೆ ವೇಳೆ ಪ್ರೇಮ್ ಸಿಂಗ್‍ಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು. ಈ ಪ್ರಕರಣ ಸಂಬಂಧ ಆರೋಪಿಗಳಾದ ತನ್ವೀರ್, ನದೀಮ್, ರೆಹಮಾನ್ ಹಾಗೂ ಜಬೀವುಲ್ಲಾ ಮನೆ ಮೇಲೆ ಸರ್ಚ್ ವಾರೆಂಟ್ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೇ ಎಸ್‍ಡಿಪಿಐ ಸಂಘಟನೆ ಜೊತೆ ಸಂಪರ್ಕ ಶಂಕೆ ಹಿನ್ನೆಲೆ ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಎಸ್‍ಡಿಪಿಐ ಕಚೇರಿ ಮೇಲೂ ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಮಹತ್ವದ ದಾಖಲೆ ಸಂಗ್ರಹಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಅಂಜನ್ ಕುಮಾರ್, ಕುಂಸಿ ಪಿಐ ಹರೀಶ್ ಪಟೇಲ್, ವಿನೋಬ ನಗರ ಪೊಲೀಸ್ ಠಾಣೆ ಪಿಐ ರವಿಕುಮಾರ್, ಸಂಚಾರಿ ಪೊಲೀಸ್ ಠಾಣೆಯ ಪಿಐ ಸಂತೋಷ್, ತುಂಗಾನಗರ ಪೊಲೀಸ್ ಠಾಣೆಯ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ.


























