ಉಡುಪಿ: ನಗರದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಬಾದಾಮಿ ಮೂಲದ ಅಯ್ಯಪ್ಪ (28) ಅವರು ಹೃದಯಘಾತದಿಂದ ಮೃತಪಟ್ಟಿದ್ದು, ಇದರ ಬೆನ್ನಲ್ಲೆ ಅವರ ಕುಟುಂಬದವರು ಅಯ್ಯಪ್ಪ ಅವರ ಪತ್ನಿ ಮತ್ತು ಮಗುವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಸಖಿ ಕೇಂದ್ರಕ್ಕೆ ದಾಖಲಿಸಿ ಆಶ್ರಯ ಕಲ್ಪಿಸಲಾಗಿದೆ.

ಮಹಿಳೆ ಮತ್ತು 20 ದಿನದ ಮಗು ಸದ್ಯ ನಿಟ್ಟೂರಿನ ಸಖೀ ಕೇಂದ್ರದ ಆಶ್ರಯದಲ್ಲಿದ್ದಾರೆ. ಅಯ್ಯಪ್ಪ ಅವರು ಉಡುಪಿಯಲ್ಲಿ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದು, ಗುರುವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಾಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಅಯ್ಯಪ್ಪ ಎರಡು ವರ್ಷಗಳ ಹಿಂದೆ ಗಂಗಾವತಿಯ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರ ಮದುವೆಗೆ ಎರಡೂ ಕಡೆಯಿಂದಲೂ ವಿರೋಧವಿತ್ತು ಎನ್ನಲಾಗಿದೆ. ಅಯ್ಯಪ್ಪ ಅವರು ನಿಧನರಾದ ಸುದ್ದಿಯನ್ನು ಅವರ ಮನೆಯವರಿಗೆ ತಿಳಿಸಿದಾಗ ಮೃತದೇಹವನ್ನು ಸ್ವೀಕರಿಸಲು ಒಪ್ಪಿಸಿದ್ದಾರೆ. ಆದರೆ ಅಯ್ಯಪ್ಪ ಅವರ ಹೆಂಡತಿ ಮತ್ತು ಮಗುವನ್ನು ಸ್ವೀಕರಿಸಿಲು ನಿರಾಕರಿಸಿದ್ದಾರೆ.


























