ಮೈಸೂರು: ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಗಂಭೀರ ಆರೋಪ ಕೇಳಿ ಬಂದಿದೆ.
ಇಬ್ಬರು ಅಪ್ರಾಪ್ತೆಯರ ಮೇಲೆ ಕಳೆದ ಮೂರೂವರೆ ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶ್ರೀಗಳು ಸೇರಿದಂತೆ, ಐದು ಮಂದಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೋ) ಅಡಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಸಿ.ಚಂದ್ರಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯಾರೆಲ್ಲ ಆರೋಪಿಗಳು..!??
ಮಠದ ಮೂವರು ಹಾಗೂ ಮೈಸೂರಿನ ಇಬ್ಬರ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶರಣರು ಮೊದಲ ಆರೋಪಿಯಾಗಿದ್ದಾರೆ. ಚಿತ್ರದುರ್ಗದಲ್ಲಿ ಮಠ ನಡೆಸುತ್ತಿರುವ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ರಶ್ಮಿ ಎರಡನೇ ಆರೋಪಿಯಾಗಿದ್ದಾರೆ. ಮಠದ ಬಸವಾದಿತ್ಯ (ಮರಿಸ್ವಾಮಿ) ಮೂರನೇ ಆರೋಪಿ. ಮಠದ ಭಕ್ತರೆನ್ನಲಾದ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಕ್ರಮವಾಗಿ ನಾಲ್ಕು ಮತ್ತು ಐದನೇ ಆರೋಪಿಗಳು.
ದೂರು ನೀಡಿದವರು ಯಾರು..!!?
ಉಚಿತ ಹಾಸ್ಟೆಲ್ನಲ್ಲಿದ್ದ ಇಬ್ಬರು ಪ್ರೌಢಶಾಲೆ ವಿದ್ಯಾರ್ಥಿನಿಯರು ಮೈಸೂರು ನಗರದಲ್ಲಿರುವ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರವಾದ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದಾರೆ.
ಶುಕ್ರವಾರ ರಾತ್ರಿ 10ರ ವೇಳೆಗೆ ಸಮಿತಿಯು ದೂರು ನೀಡುವಂತೆ ಅಧಿಕಾರಿಗೆ ಸೂಚಿಸಿತ್ತು. ಅದರಂತೆ ರಾತ್ರಿ 10:30ರ ವೇಳೆಗೆ ದೂರು ದಾಖಲಾಗಿದೆ. ಸದ್ಯ ಇಬ್ಬರು ಬಾಲಕಿಯರು ಒಡನಾಡಿ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ.
ಶ್ರೀಗಳ ಮೇಲಿರುವ ಆರೋಪ ಏನು..???
ಮಠದ ಅಧೀನದಲ್ಲಿರೋ ಶಾಲಾ ಮಕ್ಕಳ ದುರ್ಬಳಕೆ ಮಾಡಿ ಶ್ರೀಗಳು ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜ.1, 2019 ರಿಂದ ಜೂ.6, 2022ರ ವರೆಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಶರಣರು ಮೂರೂವರೆ ವರ್ಷಗಳಿಂದ, ಮತ್ತೊಬ್ಬರನ್ನು ಒಂದೂವರೆ ವರ್ಷದಿಂದ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ಈ ಕೃತ್ಯ ಉಳಿದ ಆರೋಪಿಗಳು ಸಾಥ್ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತ ಸಮಾಲೋಚನೆ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

























