ವಿಟ್ಲ: ಕೊಮ್ಮುಂಜೆ ವೆಂಕಪ್ಪ ನಾಯ್ಕ ರವರಿಗೆ ಶ್ರದ್ಧಾಂಜಲಿ, ನುಡಿನಮನ ಕಾರ್ಯಕ್ರಮವು ಮಾಣಿಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುವ ನಡುಮನೆ ಮಹಾಬಲ ಭಟ್ ವಹಿಸಿದ್ದರು. ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ರವರು ಕೊಮ್ಮುಂಜೆ ವೆಂಕಪ್ಪ ನಾಯ್ಕ ಅವರು ಸಲ್ಲಿಸಿದ ಸೇವೆ ತ್ಯಾಗ ಹಾಗೂ ಸಮರ್ಪಣಾ ಭಾವದ ಬಗ್ಗೆ ಮಾತನಾಡಿ, ಅವರು ಅನುಸರಿಸಿದ ಹಾದಿ ಮತ್ತು ಸಂಘಟಿತ ಸಮಾಜದ ಬಗ್ಗೆ ಇದ್ದ ಅವರ ಕಳಕಳಿಯನ್ನು ನೆನಪಿಸಿದರು.

ಕಾರ್ಯಕ್ರಮದ ಪ್ರಸ್ತಾವನೆಯನ್ನು ಗಣೇಶ್ ಕುಮಾರ್ ದೇಲಂತಮಜಲು ನಿರ್ವಹಿಸಿ ವೆಂಕಪ್ಪ ನಾಯ್ಕ ರವರು ನಡೆದು ಬಂದ ಹಾದಿ, ಗ್ರಾಮಕ್ಕಾಗಿ ಸಲ್ಲಿಸಿದ ಸೇವೆ, ಶ್ರೀ ವಿಷ್ಣುಮೂರ್ತಿ ದೇವರಲ್ಲಿ ಇದ್ದ ಅವರ ಅನನ್ಯ ಭಕ್ತಿಯ ಬಗ್ಗೆ ಸ್ಮರಿಸಿದರು. ಬಾಲಕೃಷ್ಣ ಮಾಣಿಲತ್ತಾಯರು ವೆಂಕಪ್ಪ ನಾಯ್ಕ ರವರು ದೇವತಾ ಕಾರ್ಯದಲ್ಲಿ ತೋರುತ್ತಿದ್ದ ಶ್ರದ್ಧೆ ಹಾಗೂ ಭಕ್ತಿಯ ಬಗ್ಗೆ ವಿವರಿಸಿದರು.


ವಿಶ್ವಹಿಂದೂ ಪರಿಷದ್ ಬಜರಂಗದಳದ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಗೋವರ್ಧನ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ವಾಗತ ಹಾಗೂ ನಿರೂಪಣೆಯನ್ನು ಎಸ್.ನಾರಾಯಣ ಅವರು ನಿರ್ವಹಿಸಿದರು.
ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸೇವಾಸಮಿತಿ, ನಿತ್ಯ ಪೂಜಾ ಸಮಿತಿ ಹಾಗೂ ವಿಶ್ವಹಿಂದೂ ಪರಿಷದ್, ಬಜರಂಗದಳ ವಿಷ್ಣುಮೂರ್ತಿ ಶಾಖೆ ಮಾಣಿಲ ಇದರ ಜಂಟಿ ಆಶ್ರಯದಲ್ಲಿ ನುಡಿನಮನ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

