ಸುಳ್ಯ: ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಸುಳ್ಯದ ಕನಕಮಜಲು ಗ್ರಾಮದ ಮೋನಪ್ಪ ಗೌಡ ಕೊರಂಬಡ್ಕ (102) ಅವರು ಬುಧವಾರ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರೂ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗುರುತಿಸಿಕೊಂಡಿದ್ದ ಮೋನಪ್ಪ ಗೌಡ ಅವರು, ನೆಹರೂ ಅವರ ಕಾರು ಚಾಲಕರಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದರು.
ಮೋನಪ್ಪ ಗೌಡ ಅವರು ಶಿವರಾಮ ಕಾರಂತರು, ಶ್ರೀನಿವಾಸ ಮಲ್ಯ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಗೂ ಚಾಲಕರಾಗಿ ಸೇವೆ ಸಲ್ಲಿಸಿದ್ದರು.
ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಹಿರಿಯರಾಗಿದ್ದ ಮೋನಪ್ಪ ಗೌಡ ಅವರು ಪುತ್ರ ವೆಂಕಟ್ರಮಣ ಕೊರಂಬಡ್ಕ, ಪುತ್ರಿಯರಾದ ಕಮಲ, ವಿಮಲ, ಕುಸುಮ ರನ್ನು ಅಗಲಿದ್ದಾರೆ.

























