ಪುತ್ತೂರು: ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಮಾರು ವರುಷಗಳಿಂದ ಮನೆಯಿಲ್ಲದೆ ಸಂಕಷ್ಟ ಪಡುತ್ತಿರುವ ಮಹಿಳೆಗೆ ಮನೆ ನಿರ್ಮಾಣ ಮಾಡಲು ದಾನಿಗಳ ಸಹಾಯ ಹಸ್ತದ ನೆರವು ಬೇಕಿದೆ.
ಕೆಯ್ಯೂರು ಮಾಡಾವು ಪತ್ಯರ್ಡ್ಕ ನಿವಾಸಿ ದಿ. ವಸಂತ ಎಂಬವರ ಪತ್ನಿ ಸುಮಾವತಿ (38) ಎಂಬವರು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಗಡು ಶೀಟ್ ಹಾಕಿದ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿರುವ ಸಣ್ಣ ಜೋಪಡಿಯಲ್ಲಿ ವಾಸವಾಗಿದ್ದು, ಮಳೆಗಾಲದ ಸಮಯ ಇವರು ಪಡುವ ಸಂಕಷ್ಟ ಅಷ್ಟಿಷ್ಟಲ್ಲ, ಈ ಬಾರಿಯ ಮಳೆಗೆ ಜೋಪಡಿಯ ಒಂದು ಭಾಗ ಹಾನಿಗೀಡಾಗಿದ್ದು, ಮಳೆಯ ನೀರು ಮನೆಯ ಒಳಗೆ ಬೀಳುವಂತಾಗಿದೆ.

ಮನೆ ನಿರ್ಮಾಣಕ್ಕಾಗಿ ಮೀನುಗಾರಿಕಾ ಇಲಾಖೆಯಿಂದ ಹಣ ಮಂಜೂರಾಗಿದ್ದು, ಆದೇಶ ಪತ್ರ ಸಿಗಬೇಕಾದರೆ ಹೊಸ ಮನೆಗೆ ಫೌಂಡೇಶನ್ ಹಾಕಿದ ಫೋಟೋ ವನ್ನು ಕಳುಹಿಸಿಕೋಡಬೇಕಾಗಿದ್ದು, ಬೀಡಿ ಕಟ್ಟಿಕೊಂಡು ಇಬ್ಬರು ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿಕೊಂಡು, ಮನೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವುದೇ ತೀರಾ ಕಷ್ಟಕರವಾಗಿದ್ದು, ಈ ವೇಳೆಯಲ್ಲಿ ಮನೆ ನಿರ್ಮಾಣದ ವಿಷಯಕ್ಕಿಳಿದರೆ ಜೀವನ ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಮಹಿಳೆ ತಮ್ಮ ಅಳಲನ್ನು ತೊಡಿಕೊಂಡಿದ್ದು, ಮನೆ ನಿರ್ಮಾಣಕ್ಕೆ ದಾನಿಗಳಾದರು ಸಹಕಾರ ನೀಡಿದರೆ ಮನೆ ನಿರ್ಮಾಣದ ಕಾರ್ಯಕ್ಕೆ ತುಂಬಾ ಸಹಕಾರಿಯಾಗಲಿದೆ ಎಂದಿದ್ದಾರೆ.

























