ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ಬಂಟ್ವಾಳ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಇದರ ವತಿಯಿಂದ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ನವ ಜೀವನ ಸದಸ್ಯರ ಸಮಾವೇಶ ಹಾಗೂ ಕೇಂದ್ರ ಒಕ್ಕೂಟಗಳ ಪದಗ್ರಹಣ ಸಮಾರಂಭ ಅ.9 ರಂದು ಸ್ಪರ್ಶ ಕಲಾಮಂದಿರ ಬಿಸಿರೋಡ್ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರೊನಾಲ್ಡ್ ಡಿಸೋಜಾ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ನೆರವೇರಿಸಿ, ಮಹಾತ್ಮ ಗಾಂಧೀಜಿಯವರ ಚಿಂತನೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವ್ಯಸನ ಮುಕ್ತ ಸಮಾಜ ನಿರ್ಮಾಣ ಕಲ್ಪನೆ ನಮ್ಮ ಜಿಲ್ಲೆ ಹಾಗೂ ರಾಜ್ಯದಲ್ಲಿಹೊಸ ಕ್ರಾಂತಿ ಉಂಟಾಗಿದೆ. ವ್ಯಸನ ಮುಕ್ತ ವ್ಯಕ್ತಿಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಯೋಜನೆಯ ಜನಜಾಗೃತಿ ವೇದಿಕೆಯ ಕಾರ್ಯ ಶ್ಲಾಘನೀಯವಾದದ್ದು ಎಂದರು.

ನವ ಜೀವನ ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಿದ ಮಾಜಿ ಸಚಿವ ರಾಮನಾಥ ರೈ ರವರು ಯಾವುದೇ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದಾಗ ಮಾತ್ರ ಯಶಸ್ವಿಯಾಗಳು ಸಾಧ್ಯ ಎಂದು ಹೇಳಿದರು. ಕೇಂದ್ರ ಒಕ್ಕೂಟಗಳ ನೂತನ ಅಧ್ಯಕ್ಷರಾದ ಚಿದಾನಂದ ರೈ ಕಕ್ಯ ರವರಿಗೆ ಜವಾಬ್ದಾರಿ ಹಸ್ತಾಂತರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ ಒಂದರ ನಿರ್ದೇಶಕರಾದ ಸತೀಶ್ ಶೆಟ್ಟಿ ನೆರವೇರಿಸಿದರು. ಶ್ರೇಷ್ಠ ಭಾಗವತಿಗಾರರಾದ ಗಿರೀಶ್ ರೈ ಕಕ್ಕೆಪದವು ಜಾಗೃತಿ ಗೀತೆಯನ್ನು ಹಾಡಿದರು. ಶೇಖರ್ ಸಾಮಾನಿ ವಿವಿಧ ಬೇಡಿಕೆಗಳ ಹಕ್ಕುತ್ತಾಯವನ್ನು ಸಭೆಯಲ್ಲಿ ಮಂಡಿಸಿ ಶಾಸಕರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.

ನವ ಜೀವನ ಸದಸ್ಯರಾದ ಗಿರಿಯಪ್ಪ ಪೂಜಾರಿ ವಗ್ಗ ತಾವು ಕುಡಿತದ ಚಟವನ್ನು ಬಿಟ್ಟು ಅಭಿವೃದ್ಧಿ ಹೊಂದಿದ ಬಗ್ಗೆ ಹಾಗೂ ಜಯಂತಿ ಪ್ರಕಾಶ್ ಕೋಡಿಯಡ್ಕ ತಮ್ಮ ಪತಿಯ ಮಧ್ಯಪಾನದಿಂದ ಆದ ಸಮಸ್ಯೆ ಯೋಜನೆಯ ಮಧ್ಯವರ್ಜನಾ ಶಿಬಿರದ ಮೂಲಕ ತನ್ನ ಪತಿ ಮಧ್ಯಪಾನಮುಕ್ತರಾದ ನಂತರದಿಂದ ತಮ್ಮ ಕುಟುಂಬದಲ್ಲಾದ ಬದಲಾವಣೆಯ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ನವ ಜೀವನ ಸದಸ್ಯರಿಗೆ ಯೋಜನೆಯ ವಿಶೇಷ ಸಾಲ ಸೌಲಭ್ಯದ ಅಂಗವಾಗಿ ಸಾಂಕೇತಿಕವಾಗಿ ಒಬ್ಬರಿಗೆ ಸ್ವಾವಲಂಬಿ ಉದ್ಯೋಗದ ಬಗ್ಗೆ ಆಟೋರಿಕ್ಷಾ ಖರೀದಿಸಿ ಅದರ ಕೀ ಹಸ್ತರಿಸಲಾಯಿತು. ಹಾಗೂ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿವಿಧ ಸಲಕರಣೆ ವಿತರಿಸಲಾಯಿತು.

ವೇದಿಕೆಯಲ್ಲಿ ರುಕ್ಮಯ ಪೂಜಾರಿ, ಕೆಯ್ಯೂರು ನಾರಾಯಣ ಭಟ್, ಕಿರಣ್ ಹೆಗ್ಡೆ,ಬಾಲಕೃಷ್ಣ ಆಳ್ವ, ಕೃಷ್ಣಕುಮಾರ್ ಪೂಂಜ,ಪ್ರೊಫೆಸರ್ ತುಕಾರಾಮ್ ಪೂಜಾರಿ, ಡಾಕ್ಟರ್ ವಸಂತ ಬಾಳಿಗ ಬಂಟ್ವಾಳ, ನಿಕಟಪೂರ್ವ ಅಧ್ಯಕ್ಷರಾದ ಮಾಧವ ವಳವೊರು,ಕೃಷ್ಣಪ್ಪ ಪೂಜಾರಿ ಅಲ್ಲಿಪಾದೆ, ಚಂದಪ್ಪ ಮೂಲ್ಯ, ಸದಾನಂದ ನಾವುರ, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಜನೆಯ ಬಂಟ್ವಾಳ ಹಾಗೂ ವಿಟ್ಲ ತಾಲೂಕು ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ನವಾ ಜೀವನ ಸದಸ್ಯರು, ಗ್ರಾಮ ಅಭಿವೃದ್ಧಿ ಯೋಜನೆಯ ಸದಸ್ಯರು ಬಾಗವಸಿದ್ದರು. ಯೋಜನಾ ಪದಾಧಿಕಾರಿಗಳಾದ ಮಾನಸ ಹಾಗೂ ಅಶ್ವಿನಿ ಪ್ರಾರ್ಥಿಸಿ , ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ ಸ್ವಾಗತಿಸಿ, ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ವಂದಿಸಿದರು. ಸಿದ್ದಕಟ್ಟೆ ವಲಯ ಮೇಲ್ವಿಚಾರಕ ಶಿವರಂಜನ್ ಹಾಗೂ ಪುಂಜಾಲ್ ಕಟ್ಟೆ ಮೇಲ್ವಿಚಾರಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.






























