ಕಡಬ: ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲು ನಿಲ್ದಾಣದ ಬಳಿ ರೈಲು ಇಂಜಿನ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನೆಟ್ಟಣದಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಐತ್ತೂರು ಗ್ರಾಮದ ಓಟೆಕಜೆ ನಾಗಣ್ಣ ಎಂದು ಗುರುತಿಸಲಾಗಿದೆ.
ರೈಲು ಇಂಜಿನ್ ಡಿಕ್ಕಿಯಾದ ರಭಸಕ್ಕೆ ಒಂದು ಕಾಲು ಮತ್ತು ಒಂದು ಕೈ ತುಂಡಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮಂಗಳೂರಿನಲ್ಲಿ ನಡೆದಿದ್ದ ತನ್ನ ಮಗಳು ಭಾಗವಹಿಸಿದ್ದ ಕ್ರೀಡಾಕೂಟಕ್ಕೆ ತೆರಳಿ ನೆಟ್ಟಣ ರೈಲು ನಿಲ್ದಾಣದಲ್ಲಿ ತಮ್ಮ ಸತೀಶ ಓಟೆಕಜೆ ಎಂಬವರ ಜೊತೆ ಬಂದಿಳಿದಿದ್ದರು. ಬಳಿಕ ಅಡ್ಡ ದಾರಿ ಮೂಲಕ ಮನೆಯತ್ತ ತೆರಳಲು ನಿಲ್ದಾಣದ ಸಮೀಪದಲ್ಲೇ ರೈಲು ಹಳಿ ದಾಟುತ್ತಿದ್ದಾಗ ಏಕಾಏಕಿ ರೈಲು ಇಂಜಿನ್ ಬಂದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕೈ,ಕಾಲು ಮುರಿದು ಹಳಿ ಬದಿ ಎಸೆಯಲ್ಪಟ್ಟು ಸಾವಿನ ದವಡೆಯಿಂದ ಪಾರಾಗಿದ್ದಾರೆ.
























