ನಟ ರಮೇಶ್ ಅರವಿಂದ್ ಯಕ್ಷ ಯುವರಾಜನಾಗಿ ಮಿಂಚಿದ್ದಾರೆ. ಬಹುಭಾಷಾ ಕಲಾವಿದ ರಮೇಶ್ ಅರವಿಂದ್ ಯಕ್ಷಗಾನದ ವೇಷ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಹಲವು ದಶಕಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಯಕ್ಷಗಾನ ಕಲೆಯ ಬಗ್ಗೆ ರಮೇಶ್ ಅರವಿಂದ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಛಾಯಾಗ್ರಹಣದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ, ಉಡುಪಿ ಕೊಡಂಗಳದ ರಾಘವೇಂದ್ರ ಫೋಟೋ ಕ್ಲಿಕ್ ಮಾಡಿದ್ದಾರೆ. ಸುವರ್ಣಾ ನದಿ ತೀರದಲ್ಲಿರುವ ಕುದ್ರು ನೆಸ್ಟ್ ಎಂಬ ಹೋಮ್ ಸ್ಟೇಯಲ್ಲಿ ರಮೇಶ್ ಅರವಿಂದ್ ಸಾಂಪ್ರದಾಯಿಕವಾಗಿ ಬಣ್ಣಹಚ್ಚಿದ್ದಾರೆ.

ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಲು ಉಡುಪಿಗೆ ಬಂದಿದ್ದ ನಟ, ಬರಹಗಾರ, ಸ್ಫೂರ್ತಿ ತುಂಬುವ ಭಾಷಣಕಾರ, ನಿರೂಪಕ, ರಮೇಶ್ ಅರವಿಂದ್ ಉಡುಪಿಯ ಮನೋವೈದ್ಯ ಡಾ. ವಿರೂಪಾಕ್ಷ ದೇವರು ಮನೆಯವರೊಂದಿಗೆ ಫೋಕಸ್ ರಾಘು ಅವರ ಕುದ್ರು ನೆಸ್ಟ್ ಭೇಟಿ ನೀಡಿದ್ದರು.

ಪರಿಸರ, ನದಿ, ಮನೆ, ಕ್ರಿಯಾಶೀಲ ವಿನ್ಯಾಸವನ್ನು ಕಂಡು ಮೆಚ್ಚುಗೆ ಸೂಚಿಸಿದ್ದರು. ರಾಘು ಅವರ ಛಾಯಾಚಿತ್ರಗಳನ್ನು ಕಂಡು ಬೆರಗು ವ್ಯಕ್ತಪಡಿಸಿ ತನಗೂ ಫೋಟೋ ಶೂಟ್ ಮಾಡ್ತೀರಾ ಎಂದು ಕೇಳಿದ್ದರು. ಅದರಂತೆ ರಮೇಶ್ ಅರವಿಂದ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.



























