ಪುತ್ತೂರು: ಆದರ್ಶ ಆಸ್ಪತ್ರೆಯ ಹಿರಿಯ ಚೇತನ ಸೆಕ್ಯೂರಿಟಿ ಗಾರ್ಡ್ ಆಗಿರುವ ಕಾಮರಾಜನ್ ಅವರ 86ನೇ ಹುಟ್ಟು ಹಬ್ಬದ ಆಚರಣೆಯನ್ನು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಸೇರಿಕೊಂಡು ಆಚರಿಸಿದ್ದು, ಈ ಸಂದರ್ಭ ನೌಕರ ಕಾಮರಾಜನ್ ಅವರು ಭಾವುಕರಾಗಿ ಆತ್ಮಾವಕಲೋಕನ ಮಾಡಿ ಸಂತೋಷದ ಕ್ಷಣವನ್ನು ಆನಂದಿಸಿದರು.

ಸೆಕ್ಯೂರಿಟಿ ಕಾಮರಾಜನ್ ಅವರು ದೀಪ ಪ್ರಜ್ವಲಿಸಿ ಕೇಕ್ ಕತ್ತರಿಸಿ ಆಸ್ಪತ್ರೆಯ ವೈದ್ಯರಾದ ಡಾ.ಎಂ.ಕೆ.ಪ್ರಸಾದ್, ಡಾ. ಬಿ.ಶ್ಯಾಮ ಮತ್ತು ಡಾ. ಸುಬ್ರಾಯ ಭಟ್ ರವರಿಗೆ ನೀಡಿದರು. ಇದೇ ಸಂದರ್ಭದಲ್ಲಿ ವೈದ್ಯರು ಕಾಮರಾಜನ್ ಅವರಿಗೂ ಕೇಕ್ ತಿನ್ನಿಸುವ ಮೂಲಕ ಸಂತೋಷದ ಕ್ಷಣ ವ್ಯಕ್ತಪಡಿಸಿದರು.
ಡಾ.ಎಂ.ಕೆ.ಪ್ರಸಾದ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಹಿರಿಯರಾದ ಕಾಮರಾಜನ್ ಅವರ ಕಾಲು ಹಿಡಿದು ಆಶೀರ್ವಾದ ಪಡೆದರು. ಮಾಲಕರು ನೌಕರನ ಕಾಲು ಹಿಡಿಯಬಾರದು ಎಂದು ಕಾಮರಾಜನ್ ಅವರು ಹಿಂದೆ ಸರಿದರೂ ಡಾ.ಎಂ.ಕೆ.ಪ್ರಸಾದ್ ಅವರು ನೀವು ನಮ್ಮಿಂದ ಹಿರಿಯರು ನಮಗೆ ಆಶೀರ್ವಾದ ನೀಡಿ ಎಂದು ಹೇಳಿ ಕಾಲು ಹಿಡಿದು ಆಶೀರ್ವಾದ ಪಡೆದರು. ಈ ವಿಶೇಷ ಕಾರ್ಯಕ್ರಮವು ವೈದ್ಯರ ಮತ್ತು ಸಿಬ್ಬಂದಿಗಳ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಯಿತು.

ಸಿಬ್ಬಂದಿಗಳಾದ ನಾರಾಯಣ, ಉದಯ ಸಹಿತ ಹಲವಾರು ಮಂದಿ ಸಂಭ್ರಮಾಚರಣೆಯ ಕಾರ್ಯಕ್ರಮ ನಿರ್ವಹಿಸಿದರು.























