ನವದೆಹಲಿ: ಜಗತ್ತಿನಾದ್ಯಂತ ಸದ್ದು ಮಾಡಿದ್ದ ಕರ್ನಾಟಕದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಮತ್ತು ಸುಧಾಂಶು ಧುಲಿಯಾ ವಿಭಜಿತ ತೀರ್ಪು ನೀಡಿದ್ದಾರೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ರವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದ್ದಾರೆ. ಆದರೇ ನ್ಯಾಯಮೂರ್ತಿ ಸುಧಾಂಶು ಅವರು ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದ್ದಾರೆ. ಇಬ್ಬರು ವಿಭಿನ್ನ ತೀರ್ಪು ನೀಡಿರುವುದರಿಂದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ (ಸಿಜೆಐ) ವರ್ಗಾವಣೆ ಮಾಡಲಾಗಿದೆ.
ಪ್ರಕರಣದ ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮುಂದಿನ ದಿನಗಳಲ್ಲಿ ವಿಸ್ತೃತ ನ್ಯಾಯಪೀಠ ರಚಿಸುವ ಸಾಧ್ಯತೆಯಿದೆ. ಪ್ರಕರಣವನ್ನು ಮತ್ತೊಮ್ಮೆ ಆಮೂಲಾಗ್ರ ಪರಿಶೀಲಿಸಿದ ನಂತರ ವಿಸ್ತೃತ ನ್ಯಾಯಪೀಠವು ತನ್ನ ತೀರ್ಪು ನೀಡಲಿದೆ. ವಿಸ್ತೃತ ನ್ಯಾಯಪೀಠ ರಚಿಸುವುದು ಮತ್ತು ವಿಚಾರಣೆಯ ಸ್ವರೂಪ ನಿರ್ಧರಿಸುವುದು ಮುಖ್ಯ ನ್ಯಾಯಮೂರ್ತಿಯ ವಿವೇಚನೆಗೆ ಬಿಟ್ಟ ಅಧಿಕಾರವಾಗಿರುತ್ತದೆ.
ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಹೈಕೋರ್ಟ್ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಶಾಲೆ-ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮೂರು ವಾರಗಳ ಹಿಂದೆ ತೀರ್ಪನ್ನು ಕಾಯ್ದಿರಿಸಿತ್ತು. ಸೆಪ್ಟೆಂಬರ್ 22ರವರೆಗೂ ನಿರಂತರವಾಗಿ 10 ದಿನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧೂಲಿಯಾ ಅವರಿದ್ದ ಪೀಠ ವಾದ- ಪ್ರತಿವಾದ ಆಲಿಸಿತ್ತು.
























