ಬಂಟ್ವಾಳ: ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಕಲ್ಲಡ್ಕದಲ್ಲಿ ನಡೆಯುತ್ತಿರುವ ಫೈ ಓವರ್ ಕಾಮಗಾರಿಯ ನಿರ್ಮಾಣ ಹಂತದ ಪಿಲ್ಲರ್ ಹಠಾತ್ ಕುಸಿತಗೊಂಡ ಘಟನೆ ಅ.13 ರಂದು ಮಧ್ಯಾಹ್ನ ನಡೆದಿದೆ.

ಕಲ್ಲಡ್ಕ ಪೇಟೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಫ್ಲೈ ಓವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವು ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಆದರೇ ಇದೀಗ ನಿರ್ಮಾಣ ಹಂತದ ಪಿಲ್ಲರ್ ಕಾಮಗಾರಿ ಕುಸಿದಿದ್ದು, ಈ ಘಟನೆಯ ನಂತರ ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ವ್ಯಕ್ತವಾಗಿದೆ. ಅಸುರಕ್ಷಿತ ರೀತಿಯಲ್ಲಿ ಕಾಮಗಾರಿ ನಡೆಯುತ್ತಿರುವುದೇ ಅವಾಂತರಕ್ಕೆ ಕಾರಣವಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಲ್ಲರ್ ಕುಸಿತದ ವೇಳೆ ವಾಹನ ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಇಲ್ಲದೆ ಇರುವುದು ನಡೆಯ ಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಪಿಲ್ಲರ್ ನಿರ್ಮಾಣಕ್ಕಾಗಿ ಕಬ್ಬಿಣದ ಸರಳುಗಳನ್ನು ಸಿದ್ಧತೆ ನಡೆಸುತ್ತಿದ್ದ ವೇಳೆ ಅದು ಕುಸಿದು ಬಿದ್ದಿದೆ ಎನ್ನಲಾಗಿದೆ.

ನಿರ್ಮಾಣ ಹಂತದಲ್ಲೇ ಈ ರೀತಿ ಪಿಲ್ಲರ್ ಕುಸಿಯುತ್ತಿರುವ ಬೆಳವಣಿಗೆಯಿಂದ ಆತಂಕಗೊಂಡಿರುವ ಸಾರ್ವಜನಿಕರು ಕಾಮಗಾರಿ ಪೂರ್ಣಗೊಂಡ ಬಳಿಕ ಅನಾಹುತಗಳು ನಡೆದರೆ ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸುತ್ತಿದ್ದಾರೆ..


























