ನವದೆಹಲಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ.
20 ವರ್ಷಗಳ ನಂತರ ನಡೆದ ಪಕ್ಷದ ಮೊದಲ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ ವಿರುದ್ದ ಭರ್ಜರಿ ಗೆಲುವು ಸಾಧಿಸಿದ್ದಾರೆ. ರಾಜ್ಯಸಭೆಯ ಪ್ರತಿಪಕ್ಷದ ನಾಯಕನಾಗಿದ್ದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಹೊಸ ಅಧ್ಯಕ್ಷರ ಆಯ್ಕೆಗೆ ನಡೆದಿದ್ದ ಚುನಾವಣೆಯ ಮತ ಎಣಿಕೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಮಲ್ಲಿಕಾರ್ಜುನ ಖರ್ಗೆ ನೂತನ ಸಾರಥಿಯಾಗಿದ್ದಾರೆ.
ಎಐಸಿಸಿ ಅಧ್ಯಕೀಯ ಚುನಾವಣೆಯಲ್ಲಿ ಒಟ್ಟು 9,385 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ 415 ಮತಗಳನ್ನು ಅಮಾನ್ಯಗೊಳಿಸಲಾಗಿತ್ತು. ಈ ಪೈಕಿ 7,897 ಮತಗಳನ್ನು ಪಡೆದ ಮಲ್ಲಿಕಾರ್ಜುನ ಖರ್ಗೆ ಜಯಭೇರಿ ಭಾರಿಸಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ಶಶಿ ತರೂರ್ 1,072 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ.


























