ಬೆಂಗಳೂರು: ಇದೇ ಮೊದಲ ಬಾರಿಗೆ ಕೆಎಸ್ ಆರ್ ಟಿಸಿ ಸಿಬ್ಬಂದಿಗಳು ಹಾಗೂ ಅವರ ಅವಲಂಬಿತರಿಗಾಗಿ 50 ಲಕ್ಷ ರೂ. ಅಪಘಾತ ವಿಮೆ ಪ್ಯಾಕೇಜ್ ಯೋಜನೆಯ ಒಡಂಬಡಿಕೆಗೆ ಬುಧವಾರ ಸಹಿ ಹಾಕಲಾಗಿದೆ.
ಸಂಸ್ಥೆಗಾಗಿ ಹಗಲಿರುಳು ದುಡಿಯುವ ಸಿಬ್ಬಂದಿಗಳ ಆಕಸ್ಮಿಕ ಅಗಲಿಕೆಯು ಅಥವಾ ಅಂಗವೈಕಲ್ಯತೆಯು ಅವರ ಪರಿವಾರದವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದೆಂಬ ಕಾರಣದಿಂದ ಅವರ ಅವಲಂಬಿತರ ಹಿತ ಕಾಪಾಡುವ ಈ ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಶಾಸಕ, ಕೆಎಸ್ ಆರ್ ಟಿಸಿ ಅಧ್ಯಕ್ಷರಾದ ಎಂ. ಚಂದ್ರಪ್ಪ ರವರ ಸಮ್ಮುಖದಲ್ಲಿ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಎಂ ಪಂಕಜ್ ತಪ್ಲಿಯಾಲ್ ಅವರು ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ. ಚಂದ್ರಪ್ಪ, ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಉತ್ತಮವಾದ ಯೋಜನೆಯಾಗಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ರವರ ಸಹಯೋಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಸ್ತೆ ಸಾರಿಗೆ ನಿಗಮಗಳಲ್ಲಿಯೇ ಅತ್ಯಧಿಕ ಮೊತ್ತದ ಅಪಘಾತ ( On duty ಮತ್ತು Off ಡ್ಯೂಟಿ ) ಒಳಗೊಂಡಂತೆ ನೀಡಲಾಗುವ ವಿಮಾ ಯೋಜನೆಯಾಗಿರುವುದಾಗಿ ಸಂತಸ ವ್ಯಕ್ರಪಡಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ನವೀನ್ ಭಟ್ ವೈ, ನಿರ್ದೇಶಕರು (ಸಿಬಂದಿ & ಜಾಗೃತ), ಸರೋಜ್ ಕುಮಾರ್ ದಾಸ್, ಮುಖ್ಯ ವ್ಯವಸ್ಥಾಪಕರು, ಎಸ್ ಬಿಐ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


























