ಪುತ್ತೂರು: ರಸ್ತೆಯಲ್ಲಿ ತೆರಳುತ್ತಿದ್ದ ಯುವತಿಯೋರ್ವಳನ್ನು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವ ‘ಬರ್ತೀಯಾ ಮನೆಗೆ ಡ್ರಾಪ್ ಕೊಡುತ್ತೇನೆ’ ಎಂದು ಕೇಳಿದ್ದಾನೆ ಎಂದು ಯುವತಿ ಆರೋಪಿಸಿದ ಹಿನ್ನೆಲೆ ಸಾರ್ವಜನಿಕರು ಯುವಕನನ್ನು ಹಿಡಿದು ವಿದ್ಯುತ್ ಕಂಬಕ್ಕೆ ಹಗ್ಗದಿಂದ ಕಟ್ಟಿ ಹಾಕಿ, ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬಲ್ನಾಡು ಗ್ರಾಪಂ ವ್ಯಾಪ್ತಿಯ ಸಾಜ ಪನೆತ್ತಡ್ಕ ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಯುವತಿಯೋರ್ವಳು ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ಅ.20 ರಂದು ಸಂಜೆ ಬಸ್ ನಿಂದ ಇಳಿದು ಮನೆಗೆ ತೆರಳುತ್ತಿದ್ದಾಗ, ಅದೇ ದಾರಿಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಾಜ ನಿವಾಸಿ ನಾಗರಾಜ್ ಎಂಬವರು ಬರ್ತೀಯಾ ಎಂದು ಕೇಳಿದ್ದಾರೆ ಎನ್ನಲಾಗಿದ್ದು, ಈ ವಿಷಯವನ್ನು ಯುವತಿಯು ತನ್ನ ಮನೆಯಲ್ಲಿ ತಿಳಿಸಿದ್ದಾರೆ.
ನಾಗರಾಜ್ ರವರ ಸ್ಕೂಟರ್ ಪನೆತ್ತಡ್ಕ ಎಂಬಲ್ಲಿಗೆ ತಲುಪಿದಾಗ ಹಾಳಾಗಿದ್ದು, ಸ್ಕೂಟರ್ ಅನ್ನು ಅಲ್ಲೇ ಬಿಟ್ಟು ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.
ಅ.21 ರಂದು ಬೆಳಿಗ್ಗೆ ಮೆಕ್ಯಾನಿಕ್ ರನ್ನು ಕರೆದುಕೊಂಡು ಸ್ಕೂಟರ್ ನಿಲ್ಲಿಸಿದ್ದ ಪನೆತ್ತಡ್ಕಕ್ಕೆ ಬಂದಾಗ ಸ್ಥಳದಲ್ಲಿ ಸೇರಿದವರು ನಾಗರಾಜ್ ರನ್ನು ಹಿಡಿದು ವಿದ್ಯುತ್ ಕಂಬಕ್ಕೆ ಹಗ್ಗದಿಂದ ಕಟ್ಟಿ ಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿಯನ್ನು ವಿದ್ಯುತ್ ಕಂಬದಿಂದ ಬಿಡಿಸಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.























