ಬೆಂಗಳೂರು: ಕರ್ನಾಟಕ ವಿಧಾನಸಭೆಯ ಉಪ ಸಭಾಪತಿ, ಸವದತ್ತಿ ಶಾಸಕ ಆನಂದ್ ಮಾಮನಿ ಶನಿವಾರ ಮಧ್ಯರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಆನಂದ್ ಮಾಮನಿ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕ್ಯಾನ್ಸರ್ ಕಾಯಿಲೆಯಿಂದಾಗಿ ಚೆನ್ನೈ ಖಾಸಗಿ ಆಸ್ಪತ್ರೆ ಪಡೆಯುತ್ತಿದ್ದ ಅವರನ್ನು ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮಧ್ಯರಾತ್ರಿ ಕೊನೆಯುಸಿರೆಳೆದರು.
ಅನಾರೋಗ್ಯದ ನಡುವೆಯೂ ಇತ್ತೀಚೆಗೆ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ಆನಂದ್ ಮಾಮನಿ, ಗುಣಮುಖವಾಗಿ ಶೀಘ್ರ ಜನಸೇವೆಗೆ ಮರಳುವುದಾಗಿ ಹೇಳಿದ್ದರು. ನಾನು ಆರೋಗ್ಯವಾಗಿದ್ದೇನೆ, ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದಿದ್ದರು. ಆದರೆ ಇದೀಗ ಅವರು ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಇಂದು ಮಧ್ಯಾಹ್ನ ಆನಂದ್ ಮಾಮನಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.


























