ಪುತ್ತೂರು : ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿ ಯವರ ವಿರುದ್ಧದ ಮಾನಹಾನಿ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಉಪ್ಪಿನಂಗಡಿ ಬಿಲ್ಲವ ಸಮಾಜ ಬಾಂಧವರು ಉಪ್ಪಿನಂಗಡಿ ಆರಕ್ಷಕ ಠಾಣಾಧಿಕಾರಿಗಳ ಮೂಲಕ ಮಂಗಳೂರು ನಗರ ಪೊಲೀಸ್ ಕಮಿಷನರ್ ರವರಿಗೆ ಮನವಿ ಸಲ್ಲಿಸಿದ್ದಾರೆ.

ಸುರತ್ಕಲ್ ಟೋಲ್‌ಗೇಟ್ ತೆರವು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸುರತ್ಕಲ್‌ನ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಲಾಯಿ ರವರನ್ನು ಪೊಲೀಸರು ವಶಕ್ಕೆ ಪಡೆಯುವ ಸಂದರ್ಭದ ವೀಡಿಯೋ, ಫೊಟೋಗಳ ಮಾಧ್ಯಮ ತುಣುಕುಗಳನ್ನು ಪೇಸ್‌ಬುಕ್‌ನಲ್ಲಿ ಲೈಂಗಿಕ ಸಂಜೆಗಳ ಭಾಷೆಯನ್ನು ಬಳಸಿ ಪ್ರತಿಭಾ ಕುಳಾಯಿ ಯವರನ್ನು ನಿಂದಿಸಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಮಾನವಾಗಿರುವ ಈ ರೀತಿಯ ಬಹಿರಂಗ ದಾಳಿ ಮಹಿಳಾ ಸಮುದಾಯಕ್ಕೆ ಮಾಡಿದ ದ್ರೋಹವಾಗಿರುತ್ತದೆ.
ಸಮಾಜದಲ್ಲಿ ಅಭಿಪ್ರಾಯ ಭೇದಗಳಿರುವುದು ಸರ್ವೇ ಸಾಮಾನ್ಯ, ನಮ್ಮದು ಪ್ರಜಾಪ್ರಭುತ್ವ ದೇಶ, ಆದರೆ ಒಬ್ಬ ಮಹಿಳೆಯ ವಿರುದ್ಧ ಮಾನಹಾನಿಕರ ಭಾಷೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ನಮ್ಮ ಸಮುದಾಯದ ಪ್ರಬಲ ಹೋರಾಟಗಾರ್ತಿ ಪ್ರತಿಭಾ ಕುಲಾಯಿ ಯವರ ತೇಜೋವಧೆ ಮಾಡುವುದನ್ನು ನಮ್ಮ ಸಮುದಾಯ ಸಹಿಸುವುದಿಲ್ಲ. ಈ ವಿಚಾರದಲ್ಲಿ ಪ್ರತಿಭಾ ಕುಳಾಯಿವರು ಧೃತಿಗುಂದದೆ ಹೋರಾಟ ಮುಂದುವರಿಸಬೇಕು. ಅವರಿಗೆ ನಮ್ಮ ಸಂಪೂರ್ಣ ನೈತಿಕ ಬೆಂಬಲವಿರುತ್ತದೆ. ಆದುದರಿಂದ ಈ ರೀತಿಯ ಅನಾಗರಿಕ ನಡವಳಿಕೆಯನ್ನು ಮಟ್ಟಿ ಹಾಕುವ ನಿಟ್ಟಿನಲ್ಲಿ ಈ ರೀತಿ ಮಾಡಿದವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವರದರಾಜ್ ಎಂ., ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಜಯವಿಕ್ರಮ್ ಕಲ್ಲಾಪು, ಮಾಜಿ ಉಪಾಧ್ಯಕ್ಷ ಮನೋಹರ್ ಕುಮಾರ್ ಇಳಂತಿಲ, ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಅಜಿತ್ ಕುಮಾರ್ ಪಾಲೇರಿ, ಮಾಜಿ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು, ಯುವವಾಹಿನಿ ಉಪ್ಪಿನಂಗಡಿ ಘಟಕದ ಮಾಜಿ ಅಧ್ಯಕ್ಷ ಡಾ. ಆಶಿತ್ ಎಂ.ಬಿ., ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಡಿಂಬಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಮಾಣಿ ಬಿಲ್ಲವ ಸಂಘದ ಸದಸ್ಯ ತನಿಯಪ್ಪ ಪೂಜಾರಿ, ಉಪ್ಪಿನಂಗಡಿ ಯುವವಾಹಿನಿ ಘಟಕದ ಸದಸ್ಯ ಸೋಮಸುಂದರ, ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ವೆಂಕಪ್ಪ ಪೂಜಾರಿ ಮರುವೇಲು, ಉಪ್ಪಿನಂಗಡಿ ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಪಾಲೆತ್ತಡಿ ಉಪಸ್ಥಿತರಿದ್ದರು.




























