ಪುತ್ತೂರು: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ ಮಾಡಬೇಕೆಂದು ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ ರವರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದಲ್ಲಿ ದೇವಳಕ್ಕೆ ಸಂಬಂಧಪಟ್ಟ ಸ್ಥಳದಲ್ಲಿರುವ ರಥಬೀದಿ ರಸ್ತೆಯು ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇದ್ದು ಪ್ರಮುಖ ಸಂಪರ್ಕ ರಸ್ತೆಯಾಗಿರುತ್ತದೆ. ಸದ್ರಿ ರಸ್ತೆಯಲ್ಲಿ ವಾಹನಗಳು 90ರಿಂದ 100 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಈ ಅತೀ ವೇಗದ ವಾಹನ ಸಂಚಾರದಿಂದ ದೇವಸ್ಥಾನಕ್ಕೆ ಬರುವ ಮಕ್ಕಳು, ವಯೋವೃದ್ಧ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಅವಘಡಗಳು ಆಗುವ ಸಾಧ್ಯತೆ ಕೂಡ ಇರುತ್ತದೆ ಆದುದರಿಂದ ಈ ರಸ್ತೆಯಲ್ಲಿ ವಾಹನಗಳು ವೇಗವಾಗಿ ಹೋಗದಂತೆ ಸೂಕ್ತ ವೇಗ ನಿಯಂತ್ರಕವನ್ನು ಅಳವಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ತಾಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ನಗರಸಭಾ ಮಾಜಿ ಸದಸ್ಯ ನವೀನ್ ಚಂದ್ರ ನಾಕ್ ಮತ್ತು ರಾಮಕೃಷ್ಣರವರು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.