ಪುತ್ತೂರು: ಬೆಳ್ಳಾರೆಯಲ್ಲಿ ಜು.26 ರಂದು ರಾತ್ರಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು(34) ರವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ತಂಡ ಇದೀಗ ಬೆಳ್ಳಾರೆ ಸಹಿತ ವಿವಿಧೆಡೆಯ ಸೈಬರ್ ಕೇಂದ್ರಗಳಲ್ಲಿ ತನಿಖೆ ನಡೆಸುತ್ತಿದೆ.
ತಲೆ ಮರೆಸಿಕೊಂಡು ಲುಕೌಟ್ ನೊಟೀಸ್ ಜಾರಿಯಾಗಿರುವ ನಾಲ್ವರ ಪತ್ತೆಗೆ ಶೋಧ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳು ನಾಪತ್ತೆಯಾದವರು ಪಾಸ್‌ಪೋರ್ಟ್ ಮಾಡಿಸಿರಬಹುದಾದ ಸಂಶಯದಲ್ಲಿ ಸೈಬರ್ ಕೇಂದ್ರಗಳಲ್ಲಿ ವಿಚಾರಣೆ ನಡೆಸುತ್ತಿದ್ದು, ಸೈಬರ್ ಕೇಂದ್ರಗಳ ಮಾಲಕರ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್‌ಗಳ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳ್ಳಾರೆ ಸಮೀಪದ ನೆಟ್ಟಾರು ನಿವಾಸಿ ಹಾಗೂ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರು ರನ್ನು ಜು.26 ರಂದು ಅವರ ಮಾಲಕತ್ವದ ಅಕ್ಷಯ ಚಿಕನ್ ಸೆಂಟರ್‌ನ ಮುಂಭಾಗದಲ್ಲಿ ಬರ್ಬರವಾಗಿ ಹತ್ಯೆಗೈಯ್ಯಲಾಗಿರುವ ಘಟನೆಗೆ ಸಂಬಂಧಿಸಿ ದಕ್ಷಿಣ ಕನ್ನಡ, ಹುಬ್ಬಳ್ಳಿ ಮತ್ತು ಮೈಸೂರು ಸೇರಿದಂತೆ ರಾಜ್ಯದ 5 ಸ್ಥಳಗಳಲ್ಲಿ ನ.5 ರಂದು ಶೋಧ ನಡೆಸಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಮುಖರಾದ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ, ಬೆಳ್ಳಾರೆ ಗ್ರಾ.ಪಂ. ಸದಸ್ಯ ಕೆ. ಮಹಮ್ಮದ್ ಇಕ್ಬಾಲ್, ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಶಾಫಿ ಅಪಾರ್ಟ್‌ಮೆಂಟ್ ನಿವಾಸಿ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ. ಇಸ್ಮಾಯಿಲ್ ಶಾಫಿ ಮತ್ತು ಸುಳ್ಯ ತಾಲೂಕಿನ ಕಸಬಾ ಗ್ರಾಮದ ನಾವೂರು ಗಾಂಧಿನಗರ ನಿವಾಸಿ ಇಬ್ರಾಹಿಂ ಶಾ ಎಂಬವರನ್ನು ಬಂಧಿಸಿದ್ದರು.
ಬಂಧಿತರ ಮನೆಯಿಂದ ಡಿಜಿಟಲ್ ಸಾಧನಗಳು ಮತ್ತು ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕೊಲೆ ಕೃತ್ಯಕ್ಕೆ ಸಂಬಂಧಿಸಿ ಈಗಾಗಲೇ ಸುಳ್ಯ ನಿವಾಸಿ ಶಿಹಾಬ್ ಪಾಲ್ತಾಡಿ, ಅಂಕತ್ತಡ್ಕದ ರಿಯಾಝ್, ಸುಳ್ಯ ಎಲಿಮಲೆಯ ಬಶೀರ್, ಸವಣೂರಿನ ಝಾಕಿರ್, ಬೆಳ್ಳಾರೆಯ ಶಫೀಕ್, ಪಳ್ಳಿಮಜಲಿನ ಸದ್ದಾಂ ಹ್ಯಾರೀಸ್, ಬೆಳ್ಳಾರೆ ಗೌರಿಹೊಳೆಯ ನೌಫಲ್, ನಾವೂರಿನ ಅಬಿದ್ ಹಾಗೂ ಜಟ್ಟಿಪಳದ ಕಬೀರ್ ಎಂಬವರನ್ನು ಬಂಧಿಸಲಾಗಿದ್ದು, ಇದೀಗ ಕೆ. ಮಹಮ್ಮದ್ ಇಕ್ಬಾಲ್, ಕೆ. ಇಸ್ಮಾಯಿಲ್ ಶಾಫಿ ಮತ್ತು ಇಬ್ರಾಹಿಂ ಶಾ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ 13ಕ್ಕೇರಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಕೇಸು ದಾಖಲಿಸಲ್ಪಟ್ಟ ನಂತರ ತಲೆ ಮರೆಸಿಕೊಂಡಿರುವ ಸುಳ್ಯ ತಾಲೂಕು ಬೆಳ್ಳಾರೆಯ ಬೂಡು ನಿವಾಸಿ ಮಹಮ್ಮದ್ ಮುಸ್ತಫಾ, ಮಡಿಕೇರಿ ನಿವಾಸಿ ತುಫೈಲ್ ಎಂ. ಎಚ್., ಸುಳ್ಯ ತಾಲೂಕು ಕಲ್ಲನೊಟ್ಟು ನಿವಾಸಿ ಉಮ್ಮರ್ ಫಾರೂಕ್ ಹಾಗೂ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಯಾನೆ ಪೈಂಟರ್ ಸಿದ್ದಿಕ್ ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಲುಕೌಟ್ ನೊಟೀಸ್ ಜಾರಿಗೊಳಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.
ಇವರ ಪೈಕಿ ಮಹಮ್ಮದ್ ಮುಸ್ತಫಾ ಹಾಗೂ ತುಫೈಲ್ ಎಂ.ಎಚ್. ಪತ್ತೆಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಉಳಿದಿಬ್ಬರ ಪತ್ತೆಗೆ ತಲಾ 2 ಲಕ್ಷ ರೂ. ಬಹುಮಾನ ಪ್ರಕಟಿಸಲಾಗಿದೆ. ಲುಕೌಟ್ ನೊಟೀಸ್ ಜಾರಿಯಾಗಿರುವ ಈ ನಾಲ್ವರ ಪತ್ತೆಗಾಗಿ ತಂಡ ರಚಿಸಿ ವಿವಿಧೆಡೆ ಶೋಧ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳು ಪುತ್ತೂರು ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಸಹಿತ ಹಲವೆಡೆ ಸಾರ್ವಜನಿಕ ನೊಟೀಸ್ ಅಂಟಿಸಿದ್ದಾರೆ. ಅಲ್ಲದೆ, ತಲೆ ಮರೆಸಿಕೊಂಡಿರುವ ಬೆಳ್ಳಾರೆ ನಿವಾಸಿಗಳಾದ ಮಹಮ್ಮದ್ ಮುಸ್ತಫಾ, ಸಿದ್ದಿಕ್ ಯಾನೆ ಪೈಂಟರ್ ಸಿದ್ದಿಕ್, ಸುಳ್ಯದ ಉಮ್ಮರ್ ಫಾರೂಕ್ ಮತ್ತು ಮಡಿಕೇರಿಯ ತುಫೈಲ್ ಎಂ.ಎಚ್. ಪತ್ತೆಗಾಗಿ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಜೊತೆಗೆ ತಲೆ ಮರೆಸಿಕೊಂಡಿರುವ ಈ ನಾಲ್ವರು ಪಾಸ್‌ಪೋರ್ಟ್ ಮಾಡಿಕೊಂಡಿರಬಹುದಾದ ಶಂಕೆಯ ಮೇಲೆ ಹಲವು ಸೈಬರ್ ಕೇಂದ್ರಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ಳಾರೆ ಮತ್ತು ಆಸುಪಾಸಿನ ಸೈಬರ್ ಕೇಂದ್ರಗಳ ಮಾಲಕರ ಮೊಬೈಲ್ ಫೋನ್, ಕಂಪ್ಯೂಟರ್ ಸಹಿತ ಇನ್ನಿತರ ದಾಖಲೆ ಪರಿಶೀಲಿಸುತ್ತಿರುವ ಎನ್‌ಐಎ ತಂಡ ಇತರ ದಾಖಲೆ ಸಂಗ್ರಹದಲ್ಲಿಯೂ ತೊಡಗಿಸಿಕೊಂಡಿದೆ.
ಪ್ರವೀಣ್ ಹತ್ಯೆ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಜೂ.27ರಂದು ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣ ಎನ್‌ಐಎಗೆ ಹಸ್ತಾಂತರಗೊಂಡಿದ್ದು, ಅ.4 ರಂದು ಎನ್‌ಐಎ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ತನಿಖೆ ಚುರುಕುಗೊಳಿಸಿದ್ದರು.


























