ಪುತ್ತೂರು: ಹಣವನ್ನು ಪಣವಾಗಿಟ್ಟು ಜೂಜಾಟವಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಘಟನೆ ಬನ್ನೂರು ಗ್ರಾಮದ ಪಡೀಲು ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ಪಡೀಲ್ ಶಾಂಭವಿ ನಿಲಯ ನಿವಾಸಿ ಶಿವಪ್ರಸಾದ್, ಕಾಸರಗೋಡು ಮುಳ್ಳೇರಿಯಾ ಬೆಳ್ಳೂರು ನಾಟಿಕಲ್ಲು ನಿವಾಸಿ ಸುರೇಂದ್ರ, ಬನ್ನೂರು ಆರ್.ಟಿ.ಓ ಕಚೇರಿ ಬಳಿ ನಿವಾಸಿ ಮನೋಹರ ರೈ, ಕೆಮ್ಮಾಯಿ ಕೃಷ್ಣನಗರ ನಿವಾಸಿ ಇಸ್ಮಾಯಿಲ್, ಕೆಮ್ಮಾಯಿ ಬಡಾವು ನಿವಾಸಿ ದಿಲೀಪ್, ಚಿಕ್ಕಮುಡ್ನೂರು ತಾರಿಗುಡ್ಡೆ ನಿವಾಸಿ ಶೀನ, ಕಾಂತ್ ಕಾಂಪೌಂಡ್ ನಿವಾಸಿ ಪ್ರಸನ್ನ ಬಂಧಿತರು.
ನ.9 ರಂದು ಪುತ್ತೂರು ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀಕಾಂತ್ ರಾಥೋಡ್ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಬನ್ನೂರು ಗ್ರಾಮದ ವಿಜಯನಗರ ಬಡಾವಣೆಯ ಸಾರ್ವಜನಿಕ ಕಚ್ಚಾ ಮಣ್ಣು ರಸ್ತೆಯ ಬದಿಯಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳನ್ನು ಉಪಯೋಗಿ ಜೂಜಾಟ ಆಟವಾಡುತ್ತಿದ್ದಾರೆ ಎಂಬ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ಬನ್ನೂರು ಗ್ರಾಮದ ವಿಜಯನಗರ ಬಡಾವಣೆಯ ರಸ್ತೆ ಬದಿಗೆ ತಲುಪಿ ನೋಡಿದಾಗ ಸಾರ್ವಜನಿಕ ಕಚ್ಚಾ ಮಣ್ಣು ರಸ್ತೆಯ ಬಳಿ ಏಳು ಜನ ವ್ಯಕ್ತಿಗಳು ಸಾರ್ವಜನಿಕ ದಾರಿದೀಪದ ಬೆಳಕು ಮತ್ತು ಟಾರ್ಚ್ ನ ಬೆಳಕಿನಲ್ಲಿ ನೆಲಕ್ಕೆ ಕವರ್ ಹಾಕಿ ವೃತ್ತಾಕಾರದಲ್ಲಿ ಸುತ್ತುವರಿದು ಕುಳಿತುಕೊಂಡು ಇಸ್ಪೀಟು ಎಲೆಯನ್ನು ಬಳಸುತ್ತಾ ಹಣವನ್ನು ಪಣವಾಗಿಟ್ಟು ಕೊಂಡು ಉಳಾಯಿ –ಪಿದಾಯಿ ಎಂಬ ಜುಗಾರಿ ಆಟವನ್ನು ಆಡುತ್ತಿದ್ದು, ಆಟದಲ್ಲಿದ್ದ 7 ಮಂದಿ ಆರೋಪಿತರುಗಳನ್ನು ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆಯಲಾಯಿತು.
ಆರೋಪಿತರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪೀಟ್ ಎಲೆಗಳು, ಒಟ್ಟು ರೂ 9020, ಡಿ.ಪಿ ಲೆಡ್ ಲೈಟ್ ಎಂಬ ಪೋರ್ಟಬಲ್ ಟಾರ್ಚ್ ,-1 ಮತ್ತು ಜೂಜಾಟವಾಡಲು ನೆಲಕ್ಕೆ ಹಾಸಿದ ಪ್ಲಾಸ್ಟಿಕ್ ಕವರ್ ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಠಾಣಾ ಎನ್‌ಸಿಆರ್ 52/PTN/PTR(T)/2022 ರಂತೆ ದಾಖಲಿಸಿಕೊಂಡು ಇದೊಂದು ಅಸಂಜ್ಞೇಯ ಪ್ರಕರಣವಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ ಹಾಜರುಪಡಿಸಿದಂತೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.