ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿಯ
ಮುಂಭಾಗದ ಮನೆಯೊಂದರಲ್ಲಿ ಯುವಕನಿಗೆ ಹಲ್ಲೆ ನಡೆಸಿ ಜೀವ
ಬೆದರಿಕೆ ಹಾಕಿದ ಆರೋಪದಡಿ ಹತ್ತು ಮಂದಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರೇಬಂಡಾಡಿ ಗ್ರಾಮದ ಕರೆಂಕಿ ನಿವಾಸಿ ಸುರೇಶ್ ಕೆ ಎಂಬವರು ನೀಡಿದ ದೂರಿನ ಮೇರೆಗೆ ಶೇಖರ ಪೂಜಾರಿ, ಮನೋಜ್, ಪ್ರಮೋದ್, ಅಶೋಕ, ಸುರೇಶ, ಉಮೇಶ, ರತ್ನಾಕರ, ಕೃಷ್ಣಪ್ಪ ಮತ್ತು ಪ್ರದೀಪ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುರೇಶ್ ರವರು ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಕೋಡಿಂಬಾಡಿಯ ಪಂಚಾಯತ್ ಕಛೇರಿಯ ಬಳಿ ನಿವಾಸಿ, ಮೋಹನ ಎಂಬವರ ಮನೆಯಲ್ಲಿ ಸುಮಾರು ಎರಡು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ರಾತ್ರಿ ಸಮಯ ಕೂಡಾ ಮೋಹನ ರವರ ಮನೆಯಲ್ಲಿಯೇ ಉಳಿದುಕೊಂಡು ವಾರಕ್ಕೊಮ್ಮೆ ತನ್ನ ಮನೆಗೆ ಹೋಗುತ್ತಿದ್ದರು.
ನ.9 ರಂದು ಮೋಹನ ರವರ ಇನ್ನೊಂದು ಕೃಷಿ ಜಾಗವಾದ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕರ್ಪಾಡಿ ಎಂಬಲ್ಲಿಗೆ ಹೋಗಿ ಅಲ್ಲಿ ಕೆಲಸ ಮುಗಿಸಿ ಸಾಯಂಕಾಲ ಮೋಹನ ರವರ ತಂದೆ ಅಣ್ಣಪ್ಪ ಗೌಡ ಮತ್ತು ತಾಯಿಯ ಜೊತೆ ಕೋಡಿಂಬಾಡಿಗೆ ಬಂದಾಗ ಮೋಹನ ರವರ ಮನೆಯಲ್ಲಿ ಅವರ ಮಗ ಮಾತ್ರ ಇದ್ದು ಬೇರೆ ಯಾರೂ ಇರಲಿಲ್ಲ. ಬಳಿಕ ಮೋಹನ ರವರ ತಾಯಿ ಪುತ್ತೂರು ಪೇಟೆಗೆ ಹೋಗಿದ್ದು , ಮನೆಯಲ್ಲಿ ಮೋಹನ ರವರ ತಂದೆ ಮತ್ತು ಮಗ ಮಾತ್ರ ಇದ್ದು, ಹಳೆಯ ಮನೆ ಕಡೆಗೆ ಬಟ್ಟೆಗಳನ್ನು ತರಲು ಹೋದಾಗ ಹಳೆ ಮನೆಗೆ ಬೀಗ ಹಾಕಿದ್ದು, ನಂತರ ಸುರೇಶ್ ರವರು ರಾತ್ರಿ ಸುಮಾರು 8.30 ಗಂಟೆಗೆ ಮೋಹನ ರವರ ಮನೆಯಿಂದ ತನ್ನ ಮನೆಗೆ ಹೊರಟಾಗ ಮನೆಯ ಅಂಗಳಕ್ಕೆ ಶೇಖರ ಪೂಜಾರಿ, ಮನೋಜ್ , ಉಮೇಶ ,ಪ್ರಮೋದ್ , ಅಶೋಕ, ಸುರೇಶ, ಉಮೇಶ , ರತ್ನಾಕರ , ಕೃಷ್ಣಪ್ಪ , ಪ್ರದೀಪ ರವರು ಬಂದು ಸುರೇಶ್ ರನ್ನು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ಇಲ್ಲಿ ಏನು ನಿನಗೆ ಕೆಲಸ ಎಂದು ಬೈದು ಮೋಹನ ರವರ ಹಳೆಯ ಮನೆಗೆ ಕರೆದುಕೊಂಡು ಹೋಗಿ ಎಲ್ಲರೂ ಸೇರಿ ಹಲ್ಲೆಗೈದಿದ್ದು, ಸುರೇಶ್ ಬೊಬ್ಬೆ ಹೊಡೆದಾಗ ಮೋಹನ ರವರ ತಂದೆ ಹಾಗೂ ಅವರ ಮಗ ಬರುವುದನ್ನು ನೋಡಿ , ಆರೋಪಿಗಳು ಸುರೇಶ್ ಗೆ ಅವಾಚ್ಯ ಶಬ್ದಗಳಿಂದ ಬೈದು, ಕೇಸು ಕೊಡಲು ಹೋದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 94/2022 ಕಲಂ: 143,147,148,341,504,324,323,506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.

























