ವಿಟ್ಲ: ಆಟೋ ಚಾಲಕನಿಗೆ ತಂಡವೊಂಡು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ಚಾಲಕ, ಬೋಳಂತೂರು ನಾಡಾಜೆ ನಿವಾಸಿ ಶಾಕೀರ್ ಎಂಬಾತ, ಸಾದೀಕ್ ಮತ್ತು ಇತರ ಇಬ್ಬರ ವಿರುದ್ಧ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಶಾಕೀರ್ ನ.14 ರಂದು ಮುಂಜಾನೆ ಕಬಡ್ಡಿ ಮ್ಯಾಚ್ ಮುಗಿಸಿ, ತನ್ನ ಗೆಳೆಯರನ್ನು ಅವರ ಮನೆಗೆ ಬಿಟ್ಟು, ತನ್ನ ಮನೆಗೆ ಹೋಗುತ್ತಿದ್ದ ವೇಳೆ ಬೋಳಂತೂರು ಮದಕ ಎಂಬಲ್ಲಿಗೆ ತಲುಪಿದಾಗ ಆಟೋ ರಿಕ್ಷಾವನ್ನು ಅಡ್ಡಗಟ್ಟಿದ ಸಾದಿಕ್ ಮತ್ತು ಇತರ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ‘ನನ್ನ ಮೇಲೆ ನೀನು ಹಾಗೂ ನಿನ್ನ ಅಣ್ಣ ಸೇರಿಕೊಂಡು ಕೇಸು ಮಾಡಿದ್ದೀರಾ ಸುಮಾರು ಸಮಯದಿಂದ ನೀನು ಒಬ್ಬನೇ ಸಿಗುವುದನ್ನು ಕಾಯುತ್ತಿದ್ದು ಇವತ್ತು ಸಿಕ್ಕಿದ್ದೀಯಾ, ನಿನ್ನನ್ನು ಒಂದು ಕೈ ನೋಡುತ್ತೇನೆ ” ಎಂದು ಹೇಳಿ ತಲವಾರು ರೀತಿಯ ಆಯುಧವನ್ನು ತೋರಿಸಿ ಅದರಿಂದ ಕಡಿಯಲು ಬಂದಾಗ ಶಾಕೀರ್ ಬಲಗೈಯನ್ನು ಅಡ್ಡ ಹಿಡಿದಿದ್ದು ಆಯುಧ ತಾಗಿದ ಪರಿಣಾಮ ಕುತ್ತಿಗೆಯ ಬಲಭಾಗ, ಬಲಕಿವಿ ಮತ್ತು ಬಲಕೈ ಮಣಿಗಂಟಿನ ಬಳಿ ಗಾಯವಾಗಿರುತ್ತದೆ. ಸಾಧಿಕ್ ನ ಜೊತೆಗಿದ್ದ ಮುಖ ಪರಿಚಯದ ಇನ್ನಿಬ್ಬರು ಆತನಿಗೆ ಸಹಕರಿಸಿ ಒಬ್ಬಾತ ಸೊಂಟಕ್ಕೆ ತುಳಿದಿದ್ದು ,ಇನ್ನೊಬ್ಬನು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಕೊಂದು ಹಾಕುತ್ತೇವೆ ಎಂದು ಹೇಳಿರುತ್ತಾರೆ. ನಾಲ್ಕು ವರ್ಷದ ಹಿಂದೆ ಶಾಕೀರ್ ದೊಡ್ಡಪ್ಪನ ಮಗ ರಫೀಕ್ ನಿಗೂ ಆರೋಪಿ ಸಾಧಿಕನಿಗೂ ಆದ ಗಲಾಟೆಯ ವಿಚಾರದಲ್ಲಿ ಶಾಕೀರ್ ರಫೀಕ್ ನ ಪರವಾಗಿದ್ದ ವಿಚಾರವೆ ಈ ಕೃತ್ಯಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ ಕ್ರ: 176/2022, ಕಲಂ: 341, 323, 324,504,506 ಜೊತೆಗೆ 34 ಬಾಧಂಸಂ ರಂತೆ ಪ್ರಕರಣ ದಾಖಲಾಗಿದೆ..

























