ಕುಂದಾಪುರ: ಬದಿಯಡ್ಕದ ಹಿರಿಯ ದಂತ ವೈದ್ಯ ಡಾ. ಕೃಷ್ಣಮೂರ್ತಿ ಸರ್ಪಂಗಳ ಅವರ ಅನುಮಾನಾಸ್ಪದ ಸಾವಿನ ತನಿಖೆಗೆ ಕುಂದಾಪುರ ಸಿಪಿಐ ಗೋಪಿಕೃಷ್ಣ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಹಾಕೆ ತಿಳಿಸಿದ್ದಾರೆ.
ಕೃಷ್ಣಮೂರ್ತಿ ಅವರ ಛಿದ್ರಗೊಂಡ ದೇಹ ಪತ್ತೆಯಾದ ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲು ಹಳಿ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಬಳಿಕ ಡಿವೈಎಸ್‌ಪಿ ಕಚೇರಿಯಲ್ಲಿ ಅವರು ಮಾತನಾಡಿದರು.
ಸಿಪಿಐ ಗೋಪಿಕೃಷ್ಣ ನೇತೃತ್ವದಲ್ಲಿ ಮೂವರು ಎಸ್‌ಐಗಳು ಇರುವ ಪೊಲೀಸರ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದೆ. ಒಂದು ತಂಡ ಕಾಸರಗೋಡಿಗೆ ತೆರಳಿದೆ. ಕಾಸರಗೋಡು ಪೊಲೀಸರ ಜತೆ ಸಮನ್ವಯ ಸಾಧಿಸಿದ್ದೇವೆ. ಘಟನಾ ಸ್ಥಳಕ್ಕೆ ಎರಡನೆ ಬಾರಿ ಭೇಟಿ ನೀಡಿ ಪರಿಶೀಲಿಸಿದ್ದಾಗಿದೆ. ನುರಿತ ತಾಂತ್ರಿಕ ಸಿಬ್ಬಂದಿ ತಂಡದಲ್ಲಿದ್ದು, ಫೊರೆನ್ಸಿಕ್ ವೈದ್ಯರ ಅಭಿಪ್ರಾಯವನ್ನೂ ಪಡೆಯಲಿದ್ದೇವೆ ಎಂದರು.
ಕುಂದಾಪುರ ಡಿವೈಎಸ್ಪಿ ಸಂಪೂರ್ಣ ತನಿಖೆಯ ಉಸ್ತುವಾರಿ ವಹಿಸಲಿದ್ದಾರೆ. ರೈಲ್ವೇಗೆ ಸಂಬಂಧಪಟ್ಟಂತೆ ಹಾಗೂ ಸಿಸಿ ಟಿವಿ ದೃಶ್ಯಾವಳಿ ಕಲೆ ಹಾಕಲಾಗುತ್ತಿದೆ. ಕುಂದಾಪುರ ರೈಲು ನಿಲ್ದಾಣದಿಂದ 5 ಕಿ.ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿರುವುದು ಕೂಡ ನಿಗೂಢವಾಗಿದ್ದು ಕುಟುಂಬಿಕರು ಹಾಗೂ ಸ್ನೇಹಿತರು ಸಂಶಯ ವ್ಯಕ್ತಪಡಿಸಿದ್ದಾರೆ. ಮನೆಯವರು ಹಾಗೂ ಸಮಾಜದ ಸಂಶಯ ನಿವಾರಣೆ ದೃಷ್ಟಿಯಲ್ಲಿ ತನಿಖೆ ನಡೆಯಲಿದೆ. ತನಿಖೆ ಯಾವ ರೀತಿ ನಡೆಯಬೇಕೆಂದು ರೂಪರೇಖೆ, ಕ್ರಿಯಾಯೋಜನೆಯನ್ನೂ ತಯಾರಿಸಲಾಗಿದೆ. ಅತ್ತ ಕಾಸರಗೋಡು ಪೊಲೀಸರೂ ತನಿಖೆ ನಡೆಸುತ್ತಿದ್ದು ಘಟನೆಗೆ ಸಂಬಂಧಿಸಿ ಕೆಲವರನ್ನು ಬಂಧಿಸಿದ್ದಾರೆ. ಇತ್ತ ಕಡೆಯಿಂದಲೂ ತನಿಖೆ ನಡೆದು ಯಾವುದಾದರೊಂದು ಕಡೆ ಸಂಧಿಸಲಿದೆಯೇ ಎಂದು ನೋಡಬೇಕು ಎಂದರು.
ಘಟನೆ ನಡೆದ ರೈಲು ಹಳಿಯ ಪರಿಶೀಲನೆ ವೇಳೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಸಿಪಿಐ ಗೋಪಿಕೃಷ್ಣ, ತನಿಖಾ ತಂಡದ ಪಿಎಸ್‌ಐಗಳಾದ ಪವನ್, ಶ್ರೀಧರ್ ನಾಯ್ಕ, ಪ್ರಸಾದ್ ಹಾಗೂ ಸಿಬ್ಬಂದಿಗಳಿದ್ದರು. ಶ್ವಾನದಳ ಕೂಡ ಸ್ಥಳಕ್ಕೆ ಭೇಟಿ ನೀಡಿದೆ.

























