ದೈವ ಶಕ್ತಿಯ ಮೂಲಕವೇ ಅಪಾರ ಜನಮನ್ನಣೆ ಪಡೆದಿರುವ ಮತ್ತು ರಾಷ್ಟ್ರದಾದ್ಯಂತ ಯಶಸ್ಸಿ ಪ್ರದರ್ಶನ ಕಾಣುತ್ತಿರುವ ‘ಕಾಂತಾರ’ ಸಿನಿಮಾದ ನಟಿ ಸಪ್ತಮಿ ಗೌಡ ಕರಾವಳಿಯ ದೈವೀ ಕ್ಷೇತ್ರಗಳಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಂಗಳೂರಿನ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೈವಸ್ಥಾನ, ಕೊರಗಜ್ಜನ ಉದ್ಭವಶಿಲೆಯ ಆದಿತಳಕ್ಕೆ ಹಾಗೂ ಕುತ್ತಾರು ಕೊರಗಜ್ಜನ ಆದಿತಳಕ್ಕೆ ಭೇಟಿ ನೀಡಿರುವ ಅವರು, ಕೆಲ ಸಮಯ ಅಲ್ಲಿಯೇ ಇದ್ದು ಪೂಜೆ ಸಲ್ಲಿಸಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೂ ಭೇಟಿ ನೀಡಿದ ಸಪ್ತಮಿ ಗೌಡ, ದೇವಿಯ ದರ್ಶನ ಪಡೆದರು. ಇವರನ್ನು ದೇವಳದ ವತಿಯಿಂದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ರವರು ದೇವರ ಶೇಷವಸ್ತ್ರ ಪ್ರಸಾದ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಪ್ತಮಿ, ತುಳುನಾಡಿನ ದೈವಗಳ ಆಶೀರ್ವಾದದಿಂದ ತಮ್ಮ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದೈವ-ದೇವರ ಮೇಲೆ ನನಗೂ ನಂಬಿಕೆ ಇದೆ. ಈ ಕಾರಣದಿಂದಾಗಿಯೇ ಕಾಂತಾರ ಸಿನಿಮಾದ ಮೂಲಕ ನಾಡಿಗೆ ಪರಿಚಯವಾದೆ. ಇದಕ್ಕೆಲ್ಲ ದೈವ-ದೇವರ ಆಶೀರ್ವಾದವೇ ಕಾರಣ. ಸಿನಿಮಾ ಮಾಡಲುವಾಗಲೂ ಅಷ್ಟೇ ಶ್ರದ್ಧೆಯಿಂದ ಕೆಲಸ ಮಾಡಿದೆ. ಈಗಲೂ ಅದೇ ಶ್ರದ್ಧೆಯಿಂದ ಇಲ್ಲಿಗೆ ಬಂದಿರುವೆ ಎಂದರು.

























