‘ಕಾಂತಾರ’ ಸಿನಿಮಾ ಬಿಡುಗಡೆಗೊಂಡು 50 ದಿನ ಕಳೆದರೂ ಈಗಲೂ ಸಿನಿಮಾದ ಬಗ್ಗೆ ಎಲ್ಲೆಡೆ ಜನ ಮಾತನಾಡುತ್ತಿದ್ದಾರೆ. ಸಿನಿ ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಅದೇ ರೀತಿ ‘ಕಾಂತಾರ’ ಸಿನಿಮಾವನ್ನು ನೋಡಿದ ಪ್ರತಿಯೊಬ್ಬರು ಕ್ಲೈಮ್ಯಾಕ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ. ಆದರೇ ಹಲವಾರು ದಾಖಲೆ ಮಾಡಿರುವ, ಕರಾವಳಿಯ ದೈವಶಕ್ತಿಯ ಬಗ್ಗೆ ಜಗತ್ತಿಗೆ ಸಾರಿದ ಸಿನಿಮಾದ ಕೆಲ ತುಣುಕುಗಳನ್ನು ಕೆಲವರು ರೀ-ಕ್ರಿಯೇಟ್ ಮಾಡುತ್ತಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ತೆಲುಗಿನ ಟಿವಿ ಶೋವೋಂದರಲ್ಲಿ ‘ಕಾಂತಾರ’ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಮರುಸೃಷ್ಟಿಸಲಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ತುಳುನಾಡಿನ ಆರಾಧ್ಯ ಶಕ್ತಿ ಬಗ್ಗೆ ಮಾಡಿರುವ ಸಿನಿಮಾದ ದೃಶ್ಯವನ್ನು ಟಿವಿ ಶೋವೋಂದರಲ್ಲಿ ಮರುಸೃಷ್ಟಿ ಮಾಡಿರುವುದರ ಬಗ್ಗೆ ಖಂಡನೆಗಳು ವ್ಯಕ್ತವಾಗುತ್ತಿದೆ.

ತೆಲುಗಿನ ಈಟಿವಿಯಲ್ಲಿ ಪ್ರಸಾರವಾಗುವ ‘ಶ್ರೀದೇವಿ ಡ್ರಾಮಾ ಕಂಪೆನಿ’ ಕಾರ್ಯಕ್ರಮದಲ್ಲಿ ಕಳೆದ ವಾರ ಟೆಲಿಕಾಸ್ಟ್ ‘ಕಾಂತಾರ’ ಕ್ಲೈಮ್ಯಾಕ್ಸ್ ಮರುಸೃಷ್ಟಿಯಾಗಿದೆ. ನೂಕ್ ರಾಜ್ ಎನ್ನುವ ಕಲಾವಿದ ರಿಷಬ್ ಶೆಟ್ಟಿ ರವರ ಪಾತ್ರವನ್ನು ರೀ-ಕ್ರಿಯೇಟ್ ಮಾಡಿದ್ದಾರೆ.
ರಿಷಬ್ ಶೆಟ್ಟಿ ರವರು ಈ ಸಿನಿಮಾವನ್ನು ಮಾಡುವಾಗ ಯಾರ ಭಾವನೆಗೂ ಧಕ್ಕೆಯಾಗದಂತೆ ನೀತಿ-ನಿಯಮಗಳನ್ನು ಪಾಲಿಸಿ ಸಿನಿಮಾವನ್ನು ಮಾಡಿದ್ದು, ಆದರೇ ಟಿವಿ ಶೋವೋಂದರಲ್ಲಿ ‘ಕಾಂತಾರ’ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಮರುಸೃಷ್ಟಿ ಮಾಡುವಾಗ ಈ ರೀತಿಯಾದ ಯಾವ ನಿಯಮಗಳನ್ನು ಪಾಲನೆ ಮಾಡಲಾಗಿಲ್ಲ., ಕರಾವಳಿ ಭಾಗಗಳಲ್ಲಿ ದೈವಾರಾಧನೆಗೆ ವಿಶೇಷ ಮಹತ್ವವಿದ್ದು, ಅಂತಹ ದೈವಾರಾಧನೆಯನ್ನು ಟಿವಿ ಶೋಗಳಲ್ಲಿ ಮರುಸೃಷ್ಟಿ ಮಾಡುವ ಮೂಲಕ ಕರಾವಳಿ ಜನರ ಭಾವನೆಗೆ ಧಕ್ಕೆಯನ್ನುಂಟು ಮಾಡಲಾಗಿದೆ.

ಕರಾವಳಿ ಜನರ ನಂಬಿಕೆ, ಆಚಾರ, ವಿಚಾರಗಳಲ್ಲಿ ದೈವ-ದೇವರ ಪಾತ್ರ ಮಹತ್ವವಾಗಿದ್ದು, ಟಿವಿ ಶೋಗಳಲ್ಲಿ ಅದನ್ನು ಮರುಸೃಷ್ಟಿ ಮಾಡುವ ಮೂಲಕ ತುಳುನಾಡಿನ ಜನರ ನಂಬಿಕೆಗಳ ಮೇಲೆ ಘಾಸಿಯನ್ನುಂಟು ಮಾಡುವ ಕೆಲಸವಾಗುತ್ತಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.

























