ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಕೆಲ ವಿದ್ಯಾರ್ಥಿಗಳು ಪಾಕಿಸ್ತಾನ ಪ್ರೇಮ ಮೆರೆದಿದ್ದಾರೆ. ನೂರಾರು ವಿದ್ಯಾರ್ಥಿಗಳು ಹಾಗೂ ಜನರ ಎದುರೇ ಪಾಕಿಸ್ತಾನ್ಗೆ ಜೈಕಾರ ಕೂಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ಕಾಲೇಜಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ದಾವಣೆಗೆರೆ ಮೂಲದ ರಿಯಾ (18), ಪಂಜಾಬ್ ಮೂಲದ ಆರ್ಯನ್ (18) ಮತ್ತು ಆಂಧ್ರ ಮೂಲದ 17 ವರ್ಷದ ವಿದ್ಯಾರ್ಥಿ ಪಾಕ್ ಪ್ರೇಮ ಮೆರೆದಿದ್ದಾರೆ. ಈ ಸಂಬಂಧ ಮೂವರ ವಿರುದ್ಧ ಐಪಿಸಿ 153, 505(1)B ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಮೂವರ ಪೈಕಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಯುವಕ ಹಾಗೂ ಯುವತಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ತಾವು ತಮಾಷೆಗಾಗಿ ಈ ರೀತಿ ಮಾಡಿರೋದಾಗಿ ಪೊಲೀಸರ ಮುಂದೆ ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ. ಮಾರತ್ಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸದ್ಯ ಪೊಲೀಸರು ಯುವಕ ಮತ್ತು ಯುವತಿಯ ಕಾಲೇಜ್ ಐಡಿ ಮತ್ತು ಆಧಾರ್ ಕಾರ್ಡ್ ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ಕ್ಷಮೆ ಕೇಳಿ, ತಮಾಷೆ ಎಂದು ಹೇಳಿಕೆ ನೀಡಿದ್ರೂ ಇವರೆಲ್ಲ ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೂವರು ಪಾಕ್ ಪರ ಘೋಷಣೆ ಕೂಗುವ ವಿಡಿಯೋವನ್ನು ಇತರ ವಿದ್ಯಾರ್ಥಿಗಳು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋ ವೈರಲ್ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಮೂವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಘಟನೆ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ದೂರು ಸಹ ನೀಡಿದೆ ಎಂದು ತಿಳಿದು ಬಂದಿದೆ.


























