ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವದ ಪೇಟೆ ಸವಾರಿ ಸಂದರ್ಭ ಮಹಾದೇವ ಮತ್ತು ವೆಂಕಟರಮಣ ದೇವರು ಮುಖಾಮುಖಿಯಾದ ವಿಶೇಷತೆಯೊಂದು ಎ.13ರಂದು ನಡೆದಿದೆ. ಸುಮಾರು 6 ವರ್ಷದ ಬಳಿಕ ಈ ಘಟನೆ ಮರುಕಳಿಸಿದೆ.
ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ ಕೋರ್ಟ್ ರಸ್ತೆ ಮೂಲಕ ಹೋಗುತ್ತಿದ್ದಂತೆ ಸೌರಮಾನ ಯುಗಾದಿ ಹಬ್ಬದ ಅಂಗವಾಗಿ ಪೇಟೆ ಸವಾರಿಯಲ್ಲಿದ್ದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪಲ್ಲಕಿ ಉತ್ಸವದಲ್ಲಿ ಶ್ರೀ ವೆಂಕಟರಮಣ ದೇವರು ಕೋರ್ಟ್ ರಸ್ತೆಯಲ್ಲಿ ಮುಖಾಮುಖಿಯಾದರು. ಈ ವಿಶೇಷ ದೃಶ್ಯವನ್ನು ನೋಡಿದ ಭಕ್ತರ ಕಣ್ಮನತುಂಬಿತು. ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪಲ್ಲಕಿ ಉತ್ಸವದಲ್ಲಿ ಪುತ್ತೂರಿನ ಅಳಿಯ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿದರೆ ಮತ್ತೊಂದು ಕಡೆ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದುರು ಭಾಗವಹಿಸಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮತ್ತು ಸದಸ್ಯರು, ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
6 ವರ್ಷದ ಹಿಂದೆಯೂ ಮುಖಾಮುಖಿ: 6 ವರ್ಷದ ಹಿಂದೆ ಪುತ್ತೂರು ಜಾತ್ರೆ ಸಂದರ್ಭದ ಹನುಮ ಜಯಂತಿ ಉತ್ಸವ ನಡೆದಿತ್ತು. ಈ ವೇಳೆಯೂ ಪೇಟೆ ಸವಾರಿಯಲ್ಲಿದ್ದ ಶ್ರೀ ಮಹಾಲಿಂಗೇಶ್ವರ ದೇವರು ಶ್ರೀ ವೆಂಕಟರಮಣ ದೇವರನ್ನು ಜೇನು ವ್ಯವಸಾಯ ಸಹಕಾರ ಸಂಘದ ಕಚೇರಿ ಕಟ್ಟಡದ ಬಳಿ ಮುಖಾಮುಖಿಯಾಗಿ ಭೇಟಿಯಾದರು.