ಬಂಟ್ವಾಳ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಬಾಟಲಿಯಿಂದ ಹೊಡೆದು ಗಾಯಗೊಳಿಸಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ನಡೆದಿದೆ.
ತುಂಬೆ ನಿವಾಸಿ ಸುಹೈಬ್ ಸಿನಾನ್ ಎಂಬವರಿಗೆ ಆರೋಪಿ ಶೂಹೇಬ್ ಅಕ್ತರ್ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಿಂದ ಗಾಯಗೊಂಡ ಸುಹೈಬ್ ಸಿನಾನ್ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಕಾಂಪೌಂಡ್ ಒಳಗೆ ಇರುವ ಫಾಸ್ಟ್ ಪುಡ್ ಅಂಗಡಿಯಲ್ಲಿ ಸುಹೈಬ್ ಸಿನಾನ್ ಅವರು ಆಹಾರ ಸೇವಿಸಿ ಹೊರಗೆ ಬರುತ್ತಿದ್ದಂತೆ ಅಲ್ಲಿಗೆ ಬಂದ ಆರೋಪಿ ಶೊಹೇಬ್ ಅಕ್ತರ್ ಅವರು ಏಕಾಏಕಿ ಗುರಾಯಿಸಿ ನೋಡುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಬಾಟಲಿಯಿಂದ ತಲೆಗೆ ಹಾಗೂ ಹೊಟ್ಟೆಗೆ ಹೊಡೆದಿದ್ದಾನೆ. ಘಟನೆಯಿಂದ ಗಾಯಗೊಂಡ ಈತನಿಗೆ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಕ್ಷುಲ್ಲಕ ಕಾರಣಗಳಿಗಾಗಿ ಒಂದು ವರ್ಷದ ಹಿಂದೆ ಇವರ ನಡುವೆ ಗಲಾಟೆ ನಡೆದಿದ್ದು, ಬಳಿಕ ರಾಜಿಯಾಗಿತ್ತು. ಆದರೆ ಅದೇ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆತ ಹಲ್ಲೆ ನಡೆಸಿರಬಹುದು ಎಂಬ ಶಂಕೆಯನ್ನು ಪೋಲಿಸರು ವ್ಯಕ್ತಪಡಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

























