ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ, ಕಾಂಗ್ರೆಸ್ ಟಿಕೆಟ್‌ಗಾಗಿ ಅಭ್ಯರ್ಥಿಗಳು ನಾ ಮುಂದು ತಾ ಮುಂದು ಅಂತ ಕೆಪಿಸಿಸಿಗೆ ಕಚೇರಿಗೆ ಮುಗಿ ಬಿದ್ದಿದ್ದನ್ನ ನೋಡಿದ್ದೀರಿ. ಇದೀಗ, ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರೋ ಕೆಲ ಆಕಾಂಕ್ಷಿಗಳ ನಡೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗರಂ ಆಗಿದ್ದಾರೆ.
ಅಂತಿಮಗೊಳಿಸುವುದಕ್ಕೂ ಮೊದಲೇ ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೆಲವೊಂದು ಖಡಕ್ ಸೂಚನೆಯನ್ನೂ ನೀಡಿದ್ದಾರೆ.
ಗುಂಪುಗಳನ್ನ ನಿರ್ಮಿಸಿಕೊಂಡು ಗುಂಪುಗಾರಿಕೆ ನಡೆಸಬಾರದು. ಗುಂಪು ಕಟ್ಟಿಕೊಂಡು ಕೆಲಸ ಮಾಡಿ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಬಾರದು. ಸಾರ್ವಜನಿಕವಾಗಿ ವೈಯಕ್ತಿಕ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಮೂಡಿಸಬಾರದು. ಬದಲಿಗೆ ಎಲ್ಲರೂ ಒಂದಾಗಿ ಪಕ್ಷದ ಬಲರ್ಧನೆ ಮಾಡಬೇಕು ಎಂದಿದ್ದಾರೆ.
ಆಡಳಿತಾರೂಢ ಬಿಜೆಪಿ ಸರ್ಕಾರದ ವೈಫಲ್ಯಗಳನ್ನ ಜನರಿಗೆ ಮುಟ್ಟಿಸಬೇಕು. ಪ್ರತಿಯೊಂದು ಬೂತ್‌ಗೆ ತೆರಳಿ ಸರ್ಕಾರದ ಹಗರಣಗಳನ್ನ ಜನರಿಗೆ ತಲುಪಿಸಬೇಕು. ಬೆಲೆ ಏರಿಕೆ, ರೈತರ ಸಮಸ್ಯೆಗಳು, ಕೋವಿಡ್ ನಿರ್ವಹಣಾ ವೈಫಲ್ಯಗಳನ್ನ ಜನರಿಗೆ ತಿಳಿಸುವಂತೆ ಡಿಕೆಶಿ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ..


























