ಪುತ್ತೂರು: ಮಂಗಳೂರಿನ ವಕೀಲರಾದ ಕುಲದೀಪ್ ಶೆಟ್ಟಿ ರವರ ಮೇಲೆ ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪುತ್ತೂರು ವಕೀಲರ ಸಂಘದ ವತಿಯಿಂದ ತಾಲೂಕು ಅಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಡಿ.3 ರಂದು ಮಂಗಳೂರಿನ ಯುವ ವಕೀಲರಾದ ಕುಲದೀಪ್ ಶೆಟ್ಟಿ ಯವರ ಮೇಲೆ ಬಂಟ್ವಾಳದ ಪೂಂಜಾಲಕಟ್ಟೆಯ ಪೊಲೀಸರು ಒಂದು ಸಿವಿಲ್ ಪ್ರಕರಣದ ಎದ್ರಿದಾರರ ಸುಳ್ಳು ಫಿರ್ಯಾದಿಯ ಆಧಾರದ ಮೇಲೆ ಕಳ್ಳತನದ ಆರೋಪ ಹೊರೆಸಿ ಪ್ರಥಮ ವರ್ತಮಾನ ವರದಿ (F.I.R) ದಾಖಲಿಸಿ ರಾತ್ರೋರಾತ್ರಿ ವಕೀಲರ ಮನೆಗೆ ಪ್ರವೇಶ ಮಾಡಿ ಸಾಮಾನ್ಯ ಶಿಷ್ಟಚಾರವನ್ನು ತೋರದೆ ಮತ್ತು ಅವರ ವೃದ್ಧ ತಂದೆ ತಾಯಿಯರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರನ್ನು ಉಟ್ಟಬಟ್ಟೆಯಲ್ಲಿ ಅಮಾನವೀಯವಾಗಿ ಹಾಗೂ ಬಲತ್ಕಾರವಾಗಿ ಎಳೆದು ತಮ್ಮ ವಾಹನದಲ್ಲಿ ಕುಳ್ಳಿರಿಸಿ ಠಾಣೆಗೆ ಕರೆದೊಯ್ದಲ್ಲದೆ, ಠಾಣೆಯಲ್ಲಿ ವಕೀಲರಿಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇರಿ ಹಲ್ಲೆ ನಡೆಸಿ ಕ್ರೌರ್ಯ ಮೆರೆದದ್ದಲ್ಲದೇ ವಿಷಯ ತಿಳಿದು ನ್ಯಾಯವಾದಿಯ ರಕ್ಷಣೆಗಾಗಿ ಠಾಣೆಗೆ ಬಂದ ಸಹದ್ಯೋಗಿ ವಕೀಲರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ.
ವಕೀಲ ವೃತ್ತಿಯ ಬಗ್ಗೆಯು ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಸಹಾಯಕ್ಕೆ ಬಂದ ಸಹದ್ಯೋಗಿ ವಕೀಲರಾದ ಚಂದ್ರಹಾಸರ ವಿರುದ್ಧ ಕೂಡ ಪ್ರಕರಣ ದಾಖಲಿಸಿ ಬುದ್ಧಿ ಕಲಿಸುತ್ತೇನೆಂದು ಬೆದರಿಸಿರುತ್ತಾರೆ. ಅಮಾನುಷವಾಗಿ ವರ್ತಿಸಿದ ಸದ್ರಿ ಪೊಲೀಸ್ ಠಾಣೆಯ ಎಸ್.ಐ ಮತ್ತು ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ವಕೀಲ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು..

























