ಶಬರಿಮಲೆ ಅಯ್ಯಪ್ಪ ದೇವಸ್ಥಾನ ಭಕ್ತಾದಿಗಳಿಗಾಗಿ ತೆರೆದುಕೊಂಡಿದೆ. ಈ ವರ್ಷದ ಮೊದಲ ದರ್ಶನ ಆರಂಭವಾದ ನಂತರ ಇಂದು ಒಂದೇ ದಿನ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಶ್ರೀ ಅಯ್ಯಪ್ಪಸ್ವಾಮಿಯ ದರ್ಶನ ಪಡೆದಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ ಡಿಸೆಂಬರ್ 12 ರಂದು 1 ಲಕ್ಷಕ್ಕೂ ಹೆಚ್ಚು ಭಕ್ತರು ಅಯಪ್ಪ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಒಂದೇ ದಿನಕ್ಕೆ 1,07,260 ಮಂದಿ ಶಬರಿಮಲೆ ದೇಗುಲದ ದರ್ಶನಕ್ಕೆ ಬುಕ್ಕಿಂಗ್ ಮಾಡಿದ್ದು, ದಾಖಲೆಯ ಪಾದಯಾತ್ರೆಯನ್ನು ಕಂಡಿದೆ.
ಭಕ್ತರ ದಾಖಲೆ ಪ್ರಮಾಣದ ಭೇಟಿಯಿಂದಾಗಿ ಕಾಲ್ತುಳಿತದಂತಹ ಘಟನೆಗಳು ಆಗದಂತೆ ದೇವಸ್ಥಾನ ಆಡಳಿತ ಮಂಡಳಿ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಭಕ್ತರನ್ನು ಪಂಪಾದಿಂದ ಅಯ್ಯಪ್ಪನ ಸನ್ನಿಧಾನಕ್ಕೆ ಆಗಮಿಸುವ ವರೆಗೂ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದಕ್ಕಾಗಿ ಪ್ರತಿ ಹಂತದಲ್ಲೂ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಭಕ್ತಾದಿಗಳ ನೂಕುನುಗ್ಗಲಿನಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸರತಿ ಸಾಲಿನಲ್ಲಿ ಬರುವವರಿಗೆ ಲಘು ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.




























