ಬಂಟ್ವಾಳ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹುಡುಗಿಯರಿಗೆ ತೊಂದರೆ ನೀಡುತ್ತಿರುವುದಾಗಿ ಆರೋಪಿಸಿ ಮೂವರು ಹಲ್ಲೆ ನಡೆಸಿದ್ದಾರೆಂದು ವ್ಯಕ್ತಿಯೋರ್ವರು ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕು ತಲಪಾಡಿ ಬಿ-ಮೂಡ ಸಾರಾ ಪ್ಲಾಟ್ ನಿವಾಸಿ ಇಸಾಕ್ (43) ರವರು ನೀಡಿದ ದೂರಿನ ಮೇರೆಗೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇಸಾಕ್ ಮೂಡಬಿದ್ರೆ ಗಂಟಲ್ ಕಟ್ಟೆಯಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು, ಬೆಳಿಗ್ಗೆ ಬಿ.ಸಿ.ರೋಡಿನಿಂದ ಖಾಸಗಿ ಬಸ್ಸಿನಲ್ಲಿ ಮೂಡಬಿದ್ರೆಗೆ ಪ್ರಯಾಣಿಸುತ್ತಿದ್ದು, 2 ದಿನಗಳ ಹಿಂದೆ ಬೆಳಿಗ್ಗೆ ಬಿ.ಸಿ.ರೋಡಿನಿಂದ ಮೂಡಬಿದ್ರೆಗೆ ಹೋಗುತ್ತಿದ್ದ ಸಮಯ ಬಸ್ಸಿನಲ್ಲಿ ಪ್ರಯಾಣಿಕರು ಇದ್ದುದರಿಂದ ಶಾಲಾ ವಿದ್ಯಾರ್ಥಿನಿಯೊಬ್ಬಳು ನೀಡಿದ ಬ್ಯಾಗನ್ನು ಹಿಡಿದುಕೊಂಡಿದ್ದು, ಡಿ.14 ರಂದು ಮೂಡಬಿದ್ರೆಯಿಂದ ಗಂಟಲ್ ಕಟ್ಟೆಗೆ ಹೋಗಲು ಬಿ.ಸಿ.ರೋಡಿನಿಂದ ಬೆಳಿಗ್ಗೆ ಖಾಸಗಿ ಬಸ್ಸಿನಲ್ಲಿ ಹೋಗುತ್ತಾ ಬಸ್ ಕುದ್ಕೋಳಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಬಸ್ಸಿನಲ್ಲಿ ಕುಳಿತುಕೊಂಡಿದ್ದ ಒಬ್ಬಾತನು ಇಸಾಕ್ ಕುಳಿತಿದ್ದಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ನೀನು ಬಸ್ಸಿನಿಂದ ಇಳಿ ಬಸ್ಸಿನಲ್ಲಿ ಪ್ರಯಾಣಿಸುವ ಹುಡಗಿಯರಿಗೆ ತೊಂದರೆ ಕೊಡುತ್ತೀಯಾ ಎಂದು ಹಿಡಿದು ಬಸ್ಸಿನಿಂದ ಹೊರಗೆ ಕಳುಹಿಸಲು ಪ್ರಯತ್ನಿಸಿದ್ದು, ಆಗ ಬಸ್ಸು ನಿಂತಾಗ ಇಬ್ಬರು ಬಸ್ಸಿಗೆ ಹತ್ತಿ ಬಸ್ಸಿನಿಂದ ಆ ಮೂವರು ಸೇರಿ ಅವಾಚ್ಯ ಶಬ್ದಗಳಿಂದ ಬೈದು, ಹುಡುಗಿಯರಿಗೆ ಬಾರಿ ತೊಂದರೆ ಕೊಡುತ್ತೀಯಾ ಎಂದು ಹಲ್ಲೆ ನಡೆಸಿ ರಿಕ್ಷಾ ಪಾರ್ಕಿನಿಂದ ಬಂದ ರಿಕ್ಷಾದಲ್ಲಿ ಕುಳ್ಳಿರಿಸಿ ರಾಯಿ ಎಂಬಲ್ಲಿಗೆ ಕರೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ಒಂದು ಗೋಳಿ ಮರದ ಕೆಳಗೆ ರಿಕ್ಷಾವನ್ನು ನಿಲ್ಲಿಸಿ ಕಾಡು ಮರದ ದೊಣ್ಣೆಯನ್ನು ತೆಗೆದು ಮೂವರು ಸೇರಿ ಬೆನ್ನಿಗೆ, ಎಡಕೈಗೆ, ಭುಜಕ್ಕೆ , ಎರಡೂ ಕಾಲಿನ ತೊಡೆಗೆ, ಹೊಟ್ಟೆಗೆ ಹೊಡೆದು, ನೀನು ಹುಡುಗಿಯರಿಗೆ ತೊಂದರೆ ಕೊಡುತ್ತೀಯಾ ಇನ್ನು ಮುಂದೆ ಈ ಬಸ್ಸಿನಲ್ಲಿ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಠಾಣಾ ಅ.ಕ್ರ 93/2022 ಕಲಂ 504, 506, 323, 324, 342, 352 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.