ಬೆಳ್ತಂಗಡಿ: ರೋಗಿಗಳ ಸೋಗಿನಲ್ಲಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾ ಚಿನ್ನಾಭರಣ ಕದ್ದು ಸಿಲಿಕಾನ್ ಸಿಟಿ ಸೇರಿದ್ದ ಕಳ್ಳಿಯನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ಚಿನ್ನಾಭರಣ ಸಹಿತ ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿರುವ ಆಸ್ಪತ್ರೆಗೆ ಚಿಕಿತ್ಸೆಗೆಂದು ಬೆಂಗಳೂರಿನ ಹೇಮಾ ಕುಟುಂಬದೊಂದಿಗೆ ಬಂದಿದ್ದು, ಇವರ ಬಳಿ ಇದ್ದ 80 ಗ್ರಾಂ ತೂಕದ ಎರಡು ಹವಳದ ಚಿನ್ನದ ಮಾಂಗಲ್ಯ ಸರ ಹಾಗೂ 6000 ರೂಪಾಯಿ ನಗದು ಇದ್ದ ವ್ಯಾನಿಟಿ ಬ್ಯಾಗನ್ನು ಚಿಕಿತ್ಸೆಗೆ ಹೋಗಿದ್ದ ವೇಳೆಯಲ್ಲಿ ಕಳ್ಳತನ ಮಾಡಿದ್ದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಆರೋಪಿ ಬಂಟ್ವಾಳ ಗ್ರಾಮದ ನಿವಾಸಿ ಯುವತಿ ವರ್ಷಾ(26) ಎಂಬಾಕೆ ಬೆಂಗಳೂರಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಳ್ಳತನ ಮಾಡಿದ್ದ 65 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಆಕೆಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಳೆದ ಐದು ತಿಂಗಳಿಂದ ವಿಶೇಷ ಕರ್ತವ್ಯದಲ್ಲಿ ಧರ್ಮಸ್ಥಳ ಸಬ್ ಇನ್ಸೆಕ್ಟರ್ ಅನಿಲ್ ಕುಮಾರ್ ಅವರ ವಿಶೇಷ ತಂಡ ಬೆಂಗಳೂರಿನಲ್ಲಿ ಆಕೆಯನ್ನು ಬಂಧಿಸಿದೆ.
ಚಿನ್ನದ ಅಂದಾಜು ಮೌಲ್ಯ ಅಂದಾಜು 2,50,000 ಆಗಿದೆ. ಕಳವು ಬಳಿಕ ಈಕೆ ದುಬೈಗೆ ತೆರಳಲು ಸಿದ್ಧತೆ ನಡೆಸಿದ್ದಳು. ತನ್ನ ಶೋಕಿ ಜೀವನಕ್ಕಾಗಿ ಕಳವು ಕೃತ್ಯ ಮಾಡಲು ಇಳಿದಿದ್ದಳು. ಆರೋಪಿ ವರ್ಷಾಳನ್ನು ಡಿಸೆಂಬರ್ 18 ರಂದು ದುಬೈಗೆ ಕಳುಹಿಸಿ ಕೆಲಸ ಮಾಡಲು ಮನೆಮಂದಿ ವಿಸಾ ಮಾಡಿಸಿದ್ದರು. ಇದೀಗ ಯುವತಿ ಕಳ್ಳತನ ಕೇಸ್ ನಲ್ಲಿ ಜೈಲು ಪಾಲಾಗಿದ್ದಾಳೆ..