ಮಂಗಳೂರು: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಮಾರಡ್ಕ ಎಂಬಲ್ಲಿ ನಡೆದಿದೆ.
ಮಾರಡ್ಕ ನಿವಾಸಿ ಸುನಂದ ಎಂಬವರ ಮನೆಗೆ ಮಧ್ಯರಾತ್ರಿಯ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಹಂಚಿನ ಮನೆ ಬೆಂಕಿ ತಗುಲಿ ಉರಿಯಲು ಆರಂಭಿಸಿದೆ. ಈ ಸಂದರ್ಭ ಮನೆಯಲ್ಲಿದ್ದ ಸುನಂದ ರವರ ಮಗ ಹೊರಗೆ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ.

ಕೂಡಲೇ ಸ್ಥಳೀಯರು ಬೆಂಕಿಯನ್ನು ನಂದಿಸಲು ನೀರನ್ನು ಹಾಯಿಸಿದ್ದು, ಬಳಿಕ ಅಗ್ನಿಶಾಮಕದಳ ಬಂದು ಹೆಚ್ಚಿನ ಅನಾಹುತವಾಗದಂತೆ ಬೆಂಕಿಯನ್ನು ನಂದಿಸಿದ್ದಾರೆ. ಘಟನೆ ನಡೆದ ದಿನ ಸುನಂದ ರವರು ಸಂಬಂಧಿಕರ ಮನೆಗೆ ಹೋಗಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಮಾಜಿ ಪಂಚಾಯತ್ ಸದಸ್ಯ ಮೋರ್ಗನ್ ವಿಲಿಯಂ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ..
























