ಪುಂಜಾಲಕಟ್ಟೆ: ಸಹಕಾರಿ ಸಂಘದಲ್ಲಿ ವಂಚನೆ ನಡೆಸಿದ ವಿಚಾರವಾಗಿ ಸಿಬ್ಬಂದಿಯನ್ನು ಸಂಘದ ಸದಸ್ಯರೋರ್ವರು ತರಾಟೆಗೆ ತೆಗೆದುಕೊಂಡಿರುವ ಘಟನೆ ಬುಧವಾರ ಸಂಘದ ಅವರಣದಲ್ಲಿ ನಡೆದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾವಳ ಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರ ಮತ್ತು ಆಡಳಿತ ಮಂಡಳಿಯ ಸದಸ್ಯರ ತೇಜೋವಧೆ ಮಾಡುತ್ತಿರುವ ಬಗ್ಗೆ ಇದೊಂದು ರಾಜಕೀಯ ಪ್ರೇರಿತವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸದಸ್ಯ ಪ್ರಿನ್ಸ್ ಥೋಮಸ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಡಿ.21 ರಂದು ಕಾವಳ ಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಠಾರದಲ್ಲಿ ನಡೆಯಿತೆನ್ನಲಾದ ಘಟನೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿರುತ್ತದೆ.
ಸಹಕಾರಿ ಬ್ಯಾಂಕ್ ನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ವಿಷಯದ ಗ್ರಾಹಕರಾದ ನಾನು ಠಾಣೆಗೆ ದೂರು ನೀಡಿ ದೂರಿನಲ್ಲಿ ಸಹಕಾರಿ ಸಂಘದ ಸಿಬ್ಬಂದಿಗಳಾದ ಕೇಶವ ಕೋಟ್ಯಾನ್ ಮತ್ತು ರವೀಂದ್ರ ಶೆಟ್ಟಿ ರನ್ನು ಸಾಲದ ಲೆಕ್ಕ ಪತ್ರಗಳ ಬಾಪ್ತು ವಿಚಾರಿಸಲಾಗಿದೆಯೇ ಹೊರತು ಸಹಕಾರಿ ಸಂಘದ ಆಡಳಿತ ಸಮಿತಿ ಅಧ್ಯಕ್ಷರು ಮತ್ತು ನಿರ್ದೇಶಕರುಗಳ ಬಗ್ಗೆ ಯಾವುದೇ ಆರೋಪ ಮಾಡಿರುವುದಿಲ್ಲ. ಮತ್ತು ನಮ್ಮ ಸಾಲದ ಲೆಕ್ಕ ಪತ್ರಗಳ ವಿವಾದಕ್ಕೆ ಮತ್ತು ಸಹಕಾರಿ ಸಂಘದ ಆಡಳಿತ ಸಮಿತಿಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಸಹಕಾರಿ ಸಂಘದ ವಠಾರದಲ್ಲಿ ನಡೆಯಿತೆನ್ನಲಾದ ಈ ವಿದ್ಯಮಾನವನ್ನು ಒಂದು ಪಕ್ಷದ ಮುಖಂಡರು ರಾಜಕೀಯ ಪ್ರೇರಿತವಾಗಿ ಬಳಸಿಕೊಂಡು ಸಹಕಾರಿ ಸಂಘದ ಅಧ್ಯಕ್ಷರ ಮತ್ತು ಆಡಳಿತ ಮಂಡಳಿಯ ಸದಸ್ಯರ ತೇಜೋವಧೆ ಮಾಡುವ ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿ ಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ..

























