ಸುಬ್ರಹ್ಮಣ್ಯ : ಪವಿತ್ರ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ರವರು ಸಂಪ್ರದಾಯದಂತೆ ಪೂಜೆ ನೆರವೇರಿಸಿದರು.

ದೇಗುಲದ ಆಡಳಿತ ಮಂಡಳಿ ಸೇರಿದಂತೆ ನೂರಾರು ಭಕ್ತರು ಕುಕ್ಕೆಯಿಂದ 18 ಕಿ.ಮೀ. ದೂರವಿರುವ ಎತ್ತರದ ಪರ್ವತ ಏರಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಾಗಾರಾಧನೆಯ ಪ್ರಸಿದ್ಧ ತಾಣ ಕುಕ್ಕೆ ದೇವಸ್ಥಾನಕ್ಕೆ ಮತ್ತು ಕುಮಾರಪರ್ವತಕ್ಕೆ ಪವಿತ್ರ ಸಂಬಂಧವಿದ್ದು, ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ನಡೆದ ಕುಮಾರಯಾತ್ರೆಯ ಕೊನೆಯಲ್ಲಿ ಅರ್ಚಕರು ಕುಮಾರನ ಪಾದಗಳಿಗೆ ಜಲಾಭಿಷೇಕ, ಸೀಯಾಳ ಅಭಿಷೇಕ ಮಾಡಿದರು. ಬಳಿಕ ಅರಸಿನ ಮತ್ತು ಕಲ್ಲು ಸಕ್ಕರೆಯನ್ನು ಪಾದಗಳಿಗೆ ಅರ್ಪಿಸಿ ಪುಷ್ಪಾಲಂಕಾರ ಮಾಡಿ ಫಲಸಮರ್ಪಣೆ, ನೈವೇದ್ಯ ಸಮರ್ಪಣೆ, ಪೂಜೆ ನೆರವೇರಿಸಿದರು.
























