ಬೆಂಗಳೂರು: ಕೆಲವರ ಕೈಯಲ್ಲಿ ಬಿಡಿಗಾಸು ಇಲ್ಲದಿದ್ದರೂ ಶೋಕಿಗೇನು ಕಮ್ಮಿ ಇರುವುದಿಲ್ಲ. ನೋಡಿದವರ ಕಣ್ಣಿಗೆ ತಾನು ಶ್ರೀಮಂತನಂತೆ ಕಾಣಿಸಿಕೊಳ್ಳಲು ಮನೆಯವರಿಂದಲೇ ಹಣ ಕೇಳಿ ಸಮಾಜದ ಎದುರು ಬಿಟ್ಟಿ ಶೋಕಿ ನೀಡುವುದನ್ನು ನೋಡಿರುತ್ತೀರಿ. ಇನ್ನು ಕೆಲವರು ತಂದೆ ಜೇಬಿಗೆ ಕೈಹಾಕುತ್ತಾರೆ. ಇಂತಹದ್ದೇ ಪ್ರಕರಣವೊಂದು ಬೆಂಗಳೂರು ನಗರದಲ್ಲಿ ಬೆಳಕಿಗೆ ಬಂದಿದೆ.
ಪ್ರೇಯಸಿ ಜೊತೆ ಅಂತಾರಾಜ್ಯ ಪ್ರವಾಸ ಕೈಗೊಳ್ಳಲು ತನ್ನದೇ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿದ ಪ್ರಕರಣ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇರ್ಫಾನ್ ಎಂಬ ಯುವಕನಿಗೆ ಯುವತಿ ಮೇಲೆ ಲವ್ವೋ ಲವ್, ಆಕೆಯೊಂದಿಗೆ ಜಾಲಿ ರೈಡ್ ಹೋಗುವ ಕನಸು ಕೂಡ ಕಾಣುತ್ತಿದ್ದ. ಅದರಂತೆ ವರ್ಷಾಂತ್ಯದ ವೇಳೆ ಗೋವಾಕ್ಕೆ ಹೋಗುವ ಪ್ಲಾನ್ ಇಬ್ಬರೂ ಹಾಕಿಕೊಂಡಿದ್ದರು. ಗೋವಾಕ್ಕೆ ಹೋಗಿ ಜಾಲಿ ಮಾಡುವುದು ಸುಲಭವಲ್ಲ, ಅದಕ್ಕೆ ಹಣ ಅತ್ಯವಶ್ಯಕವಾಗಿದೆ. ಆದರೆ ಏನು ಮಾಡುವುದು? ಇರ್ಫಾನ್ ಜೇಬು ಖಾಲಿಯಾಗಿದೆ. ಇದಕ್ಕಾಗಿ ತನ್ನ ಮನೆಯವರು ಕಷ್ಟಪಟ್ಟು ಬೆವರು ಸುರಿಸಿ ಮಾಡಿಟ್ಟಿದ್ದ ಚಿನ್ನದ ಮೇಲೆಯೇ ಕಣ್ಣು ಹಾಕಿದ್ದಾನೆ.
ಕೆಲಸಕ್ಕೆ ಹೋಗದೆ ಅಣ್ಣ, ಅತ್ತಿಗೆ ಹಾಗೂ ಅಮ್ಮನ ಜೊತೆಯಲ್ಲೇ ಇದ್ದ ಇರ್ಫಾನ್ಗೆ ತನ್ನ ಪ್ರೇಯಸಿಯನ್ನು ಗೋವಾಗೆ ಕರೆದುಕೊಂಡು ಹೋಗಲು ಕೈಯಲ್ಲಿ ಹಣ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಎಲ್ಲರು ಮಲಗಿದ್ದ ವೇಳೆಯಲ್ಲಿ ಎದ್ದ ಇರ್ಫಾನ್, 103 ಗ್ರಾಂ ಚಿನ್ನ ಕದ್ದಿದ್ದಾನೆ. ಇದನ್ನು ಮಾರಿ ಬಂದ ಹಣದಲ್ಲಿ ಗರ್ಲ್ಫ್ರೆಂಡ್ ಜೊತೆ ಗೋವಾ ಟ್ರಿಪ್ ಹೋಗಿದ್ದಾನೆ.
ಒಂದೆಡೆ ಇರ್ಫಾನ್ನ ಗೋವಾ ಜಾಲಿ ಟ್ರಿಪ್, ಇನ್ನೊಂದೆಡೆ ಚಿನ್ನ ಕಳುವಾದ ಬಗ್ಗೆ ಚಿಂತೆಯಲ್ಲೇ ಇದ್ದ ಇರ್ಫಾನ್ ಮನೆಯವರು. 103 ಗ್ರಾಂ ಚಿನ್ನ ಕಳವಾಗಿದೆ ಎಂದು ಆರೋಪಿಸಿ ಇರ್ಫಾನ್ನ ಸಹೋದರ ಆಡುಗೋಡಿ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಸಹೋದರನ ಗೋವಾ ಟ್ರಿಪ್ ಬಯಲಾಗಿದೆ.
ಕಳ್ಳತನವಾದ ತಲೆಬಿಸಿಯಲ್ಲಿ ಕುಟುಂಬ ಇದ್ದರೆ, ಮನೆ ಮಗ ಜಾಲಿ ಟ್ರಿಪ್ನಲ್ಲಿದ್ದಾನೆ. ಇದು ಸಹಜವಾಗಿ ಶಂಕೆ ವ್ಯಕ್ತಪಡಿಸುವ ಅಂಶವಾಗಿದೆ. ಅದರಂತೆ ಅನುಮಾನಗೊಂಡು ಇರ್ಫಾನ್ನನ್ನು ವಿಚಾರಣೆ ನಡೆಸಿದ ವೇಳೆ ಅಸಲಿ ಕೃತ್ಯ ಬಯಲಾಗಿದೆ. ತನ್ನ ಪ್ರೇಯಸಿ ಜೊತೆ ಪ್ರವಾಸಕ್ಕೆ ಹೋಗಲು ತಾನೇ ಚಿನ್ನ ಕದ್ದು ಮಾರಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಇರ್ಫಾನ್ ಜೈಲು ಪಾಲಾಗಿದ್ದಾನೆ.

























