ಮೈಸೂರು: ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ರವರ ಸಹೋದರ ಪ್ರಹ್ಲಾದ್ ಮೋದಿ ಅವರ ಕಾರು ಅಪಘಾತಗೊಂಡಿರುವ ಘಟನೆ ಮೈಸೂರು ತಾಲೂಕಿನ ಕಡಕೊಳ ಬಳಿ ನಡೆದಿದೆ.
ಮರ್ಸಿಡಿಸ್ ಬೆಂಜ್ ಕಾರಿನಲ್ಲಿದ್ದ ಪ್ರಹ್ಲಾದ್ ಮೋದಿ ಪುತ್ರ ಹಾಗೂ ಸೊಸೆಗೆ ಗಾಯಗಳಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಮೈಸೂರು ಎಸ್ಪಿ ಸೀಮಾ ಲಾಟ್ಕರ್, ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿಯವರ ಕಾರ್ಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ಮೋದಿ (70), ಪ್ರಹ್ಲಾದ್ ಮೋದಿ ಪುತ್ರ ಮೆಹೂಲ್ ಪ್ರಹ್ಲಾದ್ ಮೋದಿ (40), ಸೊಸೆ ಜಿಂದಾಲ್ ಮೋದಿ (35) ಹಾಗೂ ಮೊಮ್ಮಗ ಮಾಸ್ಟರ್ ಮೆಹತ್ ಮೆಹೋಲ್ ಮೋದಿ (6) ಹಾಗೂ ಕಾರು ಚಾಲಕ ಸತ್ಯನಾರಾಯಣ ಚಾಲಕ (46) ಬಂಡೀಪುರಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಮೋದಿ ಸಹೋದರನ ಮೊಮ್ಮಗನ ಕಾಲಿಗೆ ಹಾಗೂ ಪ್ರಹ್ಲಾದ್ ಮೋದಿಗೆ ಮುಖದ ಬಳಿ ಗಾಯವಾಗಿದೆ. ಉಳಿದ ಯಾರಿಗೂ ದೊಡ್ಡ ಪ್ರಮಾಣದಲ್ಲಿ ಗಾಯಗಳಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಜೆಎಸ್‌ಎಸ್ ಆಸ್ಪತ್ರೆಯ ವೈದ್ಯ ಡಾ.ಮಧು ತಿಳಿಸಿದ್ದಾರೆ..

























