ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಖಾಸಗಿ ಡೆಂಟಲ್ ಕಾಲೇಜಿನಲ್ಲಿ ಸರ್ಕಾರಿ ಸೀಟ್ ವಿಚಾರವಾಗಿ ಡೆಂಟಲ್ ವಿದ್ಯಾರ್ಥಿನಿಗೆ ರ್ಯಾಗಿಂಗ್ ಮಾಡಿದ ಘಟನೆ ನಡೆದಿದೆ.
ಈ ಸಂಬಂಧ ಕೇರಳ ಮೂಲದ ಆರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ, ಮೂರನೇ ವರ್ಷದ ಡೆಂಟಲ್ ವಿದ್ಯಾರ್ಥಿನಿಯೇ ರ್ಯಾಗಿಂಗ್ಗೆ ಒಳಗಾದ ವಿದ್ಯಾರ್ಥಿನಿ. ಇವರು ರ್ಯಾಂಕ್ ಹೋಲ್ಡರ್ ಆಗಿದ್ದಾರೆ.
ಕೇರಳ ಮೂಲದ ಆರು ವಿದ್ಯಾರ್ಥಿಗಳ ವಿರುದ್ಧ ರ್ಯಾಂಗಿಗ್ ಮತ್ತು ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಾಗಿದೆ.
ಮೂರನೇ ವರ್ಷದ ಡೆಂಟಲ್ ವಿದ್ಯಾರ್ಥಿ ವಿಶಾಖ್, ಡಾ.ವಿಶಾಕ್, ಐಶ್ವರ್ಯ, ಐಲ್ಪಾ ಮೇರಿ ಮ್ಯಾಥ್ಯೂ, ಡೆನಲ್ ಸೆಬಾಸ್ಟಿಯನ್, ರಿಷಿಕೇಸ್, ದಯಾ ವರ್ಗೀಸ್ ವಿರುದ್ಧ ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ಮೂಲದ 6 ವಿದ್ಯಾರ್ಥಿಗಳಿಂದ ನಿರಂತರ ಕಿರುಕುಳ, ರ್ಯಾಗಿಂಗ್ ಮಾತ್ರವಲ್ಲದೆ ಹಲ್ಲೆಯನ್ನು ನಡೆಸಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮೆರಿಟ್ನಲ್ಲಿ ಕಾಲೇಜಿನಲ್ಲಿ ಸೀಟು ಪಡೆದಿದ್ದ ಇನ್ನೋರ್ವ ಯುವತಿಯನ್ನು ಇದೇ ವಿಚಾರವಾಗಿ ಕಿರುಕುಳ ನೀಡುತ್ತಿದ್ದರೆಂದು ಆರೋಪ ಮಾಡಿದ್ದಾರೆ.
ಈ ಸಂಬಂಧ ಪ್ರಿನ್ಸಿಪಾಲ್ಗೆ ಮತ್ತು ಹೆಚ್.ಒ.ಡಿ ಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಿಲ್ಲ. ಡಿ.21ನೇ ತಾರೀಖು ಅಣ್ಣ ಮತ್ತು ನನ್ನ ಮೇಲೆ ಹಲ್ಲೆ ಮಾಡಿದರು. ನಾನು ಮತ್ತು ನಮ್ಮಣ್ಣ ಊಟ ಮುಗಿಸಿ ವಾಪಸ್ ಬರುತ್ತಿದ್ದಾಗ ಕೆಟ್ಟ ಪದಗಳಿಂದ ನಿಂದನೆ ಮಾಡಿದರು. ಆ ಸಮಯದಲ್ಲಿ ನಮ್ಮ ಅಣ್ಣ ಪ್ರಶ್ನೆ ಮಾಡಿದ್ದಕ್ಕೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನಾವು ಕೂಡಲೇ ಕಾಲೇಜು ಪ್ರಿನ್ಸಿಪಾಲ್ ಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ವಿ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಈ ಘಟನೆಯ ಬಗ್ಗೆ ಡಿಪಾರ್ಟ್ಮೆಂಟ್ ಹೆಚ್.ಒ.ಡಿಗೆ ತಿಳಿಸಿದ್ದೇವೆ. ಆದರೂ ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಯಾವ ರೀತಿಯ ಕ್ರಮಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.