ಬಂಟ್ವಾಳ: ಮನೆಯಂಗಳದಲ್ಲಿ ಒಣಗಲು ಹಾಕಿದ ಅಡಿಕೆಯನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಳ್ತಿಲ ಗ್ರಾಮ ಕಶೆಕೋಡಿ ನಿವಾಸಿ ಮಂಜುನಾಥ್ ನಾಗರಾಜ್ ಭೋವಿ (50) ಬಂಧಿತ ಆರೋಪಿ.

ಡಿ.30 ರಂದು ಬೋಳಂಗಡಿ ಎಂಬಲ್ಲಿ ಅಂಗಳದಲ್ಲಿ ಒಣಗಲು ಹಾಕಿದ್ದ ಸುಮಾರು 100-120 ಕೆ.ಜಿ ಅಡಿಕೆಯನ್ನು ಕಳವುಗೈದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ರವರುಗಳ ನಿರ್ದೇಶನದಂತೆ ಹಾಗೂ ಪೊಲೀಸ್ ಉಪಾಧೀಕ್ಷಕರು,ಬಂಟ್ವಾಳ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಪೊಲೀಸರು ತಲಾಷೆ ಕಾರ್ಯ ನಡೆಸಿ ಕಳವು ಕೃತ್ಯ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದು, ಕಳವು ಮಾಡಿದ 105 ಕೆ.ಜಿ. ಅಡಿಕೆ, ಕಳವು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ಹಾಗೂ ನಗದು ಹಣವನ್ನು ವಶಪಡಿಸಲಾಗಿದೆ.
ಸದ್ರಿ ಆರೋಪಿಯು ಮಂಗಳೂರು ನಗರದ ಕೊಣಾಜೆ, ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ..

























