ಉಪ್ಪಿನಂಗಡಿ: ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಆರೋಪಿಸಿ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡಿಗ್ರಸ್ (40) ಎಂಬವರು ನೀಡಿದ ದೂರಿನ ಮೇರೆಗೆ ಸುರೇಶ್ ಅತ್ರಮಜಲು, ರಮೇಶ್ ಭಂಡಾರಿ, ರೋಹಿತ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ನ.24 ರಂದು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯ ನಿರ್ಣಯದಂತೆ ಡಿ.31 ರಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್ ತೆರವು ಮಾಡುವಂತೆ ವಿಲ್ಪ್ರೆಡ್ ಲಾರೆನ್ಸ್ ರೋಡಿಗ್ರಸ್ ರವರು ಪಂಚಾಯತ್ ಕಛೇರಿ ಸಿಬ್ಬಂದಿಯವರಿಗೆ ನೀಡಿದ ಸೂಚನೆಯಂತೆ ಸಿಬ್ಬಂದಿಗಳು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ನೆಡ್ಚಿಲ್ ಎಂಬಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಬ್ಯಾನರನ್ನು ತೆರವುಗೊಳಿಸಲು ಹೋದಾಗ ಬ್ಯಾನರ್ ತೆರವುಗೊಳಿಸದಂತೆ ಅಲ್ಲಿದ್ದವರು ತಡೆದಿದ್ದು ಪಂಚಾಯತ್ ಸಿಬ್ಬಂದಿಗಳು ರೋಡಿಗ್ರಸ್ ರವರಿಗೆ ಕರೆಮಾಡಿ ವಿಷಯ ತಿಳಿಸಿದಾಗ ಅವರು ಸ್ಥಳಕ್ಕೆ ತೆರಳಿ ಬ್ಯಾನರ್ ತೆರವುಗೊಳಿಸಲು ಮುಂದಾದಾಗ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು,ರಮೇಶ್ ಭಂಢಾರಿ ಮತ್ತು ರೋಹಿತ್ ಹಾಗೂ ಇತರರು ಬ್ಯಾನರ್ ತೆಗೆಯದಂತೆ ತಡೆಯೊಡ್ಡಿ ರೋಡಿಗ್ರಸ್ ಮೇಲೆ ಹಲ್ಲೆಗೆ ಮುಂದಾಗಿರುತ್ತಾರೆ ಹಾಗೂ ಗ್ರಾಮ ಪಂಚಾಯತ್ ವಾಹನದ ಕೀಯನ್ನು ತೆಗೆದಿಟ್ಟು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಠಾಣೆಯಲ್ಲಿ ಠಾಣಾ ಅ.ಕ್ರ 134/2022 ಕಲಂ:353, ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ..

























