ಮಂಗಳೂರು: ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದ ಹಿಂಬದಿ ಸವಾರ ಬಾಲಕ ಮೃತಪಟ್ಟ ಘಟನೆ ಕಟೀಲು ಸಮೀಪದ ಉಲ್ಲಂಜೆಯಲ್ಲಿ ನಡೆದಿದೆ.
ಉಲ್ಲಂಜೆ ಶಾಲಾ ಬಳಿಯ ನಿವಾಸಿ ಚರಣ್ (14) ಮೃತ ಬಾಲಕ.
ಕಟೀಲು ಶಾಲೆಯಲ್ಲಿ 9ನೇ ತರಗತಿ ಕಲಿಯುತ್ತಿದ್ದ ಆತ ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಕಟೀಲು ಗ್ರಾಮಕರಣಿಕರ ಕಚೇರಿ ಬಳಿ ಕಿನ್ನಿಗೋಳಿ ಕಡೆಗೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಅದರಲ್ಲಿ ಉಲ್ಲಂಜೆ ಕಡೆಗೆ ಸಂಚರಿಸುತ್ತಿರುವಾಗ ಉಲ್ಲಂಜೆ ಜುಮಾದಿ ಗುಡ್ಡೆಯ ಬಳಿ ಮುಂಭಾಗದಲ್ಲಿ ಕಿನ್ನಿಗೋಳಿಯಿಂದ ಕಟೀಲು ಕಡೆಗೆ ಬರುತ್ತಿದ್ದ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ.
ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ಚರಣ್ ರಸ್ತೆಗೆ ಎಸೆಯಲ್ಪಟ್ಟು ಬಸ್ಸಿನಡಿಗೆ ಬಿದ್ದು ಮೃತಪಟ್ಟಿದ್ದಾನೆ. ಸವಾರ ಎಡ ಬದಿಗೆ ಎಸೆಯಲ್ಪಟ್ಟ ಕಾರಣ ಬದುಕುಳಿದಿದ್ದಾರೆ.
ಮೃತ ಬಾಲಕ ತಂದೆ, ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾನೆ.
ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಬಾಲಕನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆಸ್ಪತ್ರೆಗೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತಿತರರು ಭೇಟಿ ನೀಡಿದ್ದಾರೆ..




























