ರಾಮದುರ್ಗಾ: ಸವದತ್ತಿ ಯಲ್ಲಮ್ಮ ದೇವಿಯ ದರ್ಶನಕ್ಕೆ ಹೊರಟಿದ್ದವರು ಪ್ರಯಾಣಿಸುತ್ತಿದ್ದ ವಾಹನ ಭೀಕರ ಅಪಘಾತಕ್ಕೆ ತುತ್ತಾಗಿ ಆರು ಜನ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರ ಬಳಿ ಜ.4 ರ ಮಧ್ಯರಾತ್ರಿ ನಡೆದಿದೆ.
ಮೃತರನ್ನು ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಹನುಮವ್ವ ಮ್ಯಾಗಾಡಿ (25), ದೀಪಾ (31), ಸವಿತಾ (17), ಸುಪ್ರೀತಾ (11), ಮಾರುತಿ (42) ಮತ್ತು ಇಂದ್ರವ್ವ(24) ಎಂದು ಗುರುತಿಸಲಾಗಿದೆ.
ಮೃತ ಯಾತ್ರಾರ್ಥಿಗಳು ನಡೆದುಕೊಂಡು ಯಲ್ಲಮ್ಮ ದೇವಸ್ಥಾನಕ್ಕೆ ಹೊರಟ್ಟಿದ್ದರು. ಈ ವೇಳೆ ಪಾದಯಾತ್ರೆ ಹೊರಟವರನ್ನ ನಿಲ್ಲಿಸಿ ಬೊಲೆರೊ ವಾಹನದ ಚಾಲಕ ಡ್ರಾಪ್ ಕೊಡುವುದಾಗಿ ಹೇಳಿ ವಾಹನ ಹತ್ತಿಸಿಕೊಂಡಿದ್ದಾನೆ. ಇವರು ಹತ್ತಿದ ಕೆಲವೇ ನಿಮಿಷಗಳಲ್ಲಿ ವಾಹನವು ಆಲದ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತವಾಗಿ ಆರು ಜನ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಘಟನೆ ನಡೆದ ಸ್ಥಳದ ಪರಿಶೀಲನೆ ನಡೆಸಿದರು. ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























